ADVERTISEMENT

ಬಾಡಿಗೆ ಕಟ್ಟಡದಲ್ಲಿ ನಲುಗಿದ ಪುಟಾಣಿಗಳು

ರಾಜ್ಯದಲ್ಲಿ 24,403 ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ಕಟ್ಟಡ

ಪ್ರಸನ್ನ ಕುಮಾರ ಪಿ.ಎನ್.
Published 19 ಮೇ 2019, 19:50 IST
Last Updated 19 ಮೇ 2019, 19:50 IST
ಸೌಲಭ್ಯಗಳಿಲ್ಲದೆ ಕೊರಗುತ್ತಿರುವ ಬ್ಯಾಟರಾಯನಪುರದ ಕಾಶಿನಗರದಲ್ಲಿರುವ ಅಂಗನವಾಡಿ ಕೇಂದ್ರ (ಬಾಡಿಗೆ ಕಟ್ಟಡ)
ಸೌಲಭ್ಯಗಳಿಲ್ಲದೆ ಕೊರಗುತ್ತಿರುವ ಬ್ಯಾಟರಾಯನಪುರದ ಕಾಶಿನಗರದಲ್ಲಿರುವ ಅಂಗನವಾಡಿ ಕೇಂದ್ರ (ಬಾಡಿಗೆ ಕಟ್ಟಡ)   

ಬೆಂಗಳೂರು: ನಗರದ ಬ್ಯಾಟರಾಯನಪುರ ಅಮೃತಹಳ್ಳಿಯ ಕಾಶೀನಗರ ಮುಖ್ಯರಸ್ತೆಯಲ್ಲಿ ಒಂದೆರೆಡು ಹೆಜ್ಜೆ ಹಾಕಿದರೆ ಹಳೆಯ ಕಟ್ಟಡವೊಂದರಲ್ಲಿ ಅಂಗನವಾಡಿ ಕೇಂದ್ರ ಸಿಗುತ್ತದೆ. ಅಲ್ಲಿ ಮಕ್ಕಳ ಆಟ–ಪಾಠ ನೋಡಿದ ಬಳಿಕವಷ್ಟೇ ಇದು ಅಂಗನವಾಡಿ ಎಂದು ಗೊತ್ತಾಗುತ್ತದೆ.

ಸುಣ್ಣ ಬಳಿದ ಗೋಡೆಗಳು ಕಪ್ಪಾಗಿವೆ. ಕಟ್ಟಡದ ಮುಂಭಾಗದಲ್ಲಿ ವಿದ್ಯುತ್‌ ವೈರ್‌ ಒಡೆದ ಕಿಟಕಿಗೆ ತಗಲುತ್ತಿವೆ. ತಳ್ಳುವ ಗಾಡಿ, ಕಸದ ರಾಶಿಯನ್ನು ಕಂಡರೆ ಯಾರೋ ವಾಸವಿದ್ದು ಬಿಟ್ಟು ಹೋದ ಹಳೆಯ ಮನೆಯಂತಿದೆ.

ದಾಸ್ತಾನು ಕೊಠಡಿ, ಅಡುಗೆ ಕೋಣೆ ಸೇರಿ ಇಕ್ಕಟ್ಟಾದ 3 ಕೊಠಡಿಗಳಿವೆ. ಮತ್ತೊಂದು ಕೊಠಡಿಯಲ್ಲಿ ಮಕ್ಕಳ ಕಲಿಕಾ ಭಿತ್ತಿಪತ್ರಗಳು ನೇತಾಡುತ್ತಿವೆ. ಅಡುಗೆ ಕೋಣೆಗೆ ಹೊಂದಿಕೊಂಡಂತೆ ಶೌಚಾಲಯ ಇದ್ದರೂ ಇಲ್ಲದಂತಾಗಿದ್ದು, ಪುಟಾಣಿಗಳುಬೀದಿಬದಿಯಲ್ಲೇ ಶೌಚ, ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಜೋರು ಮಳೆ ಬಂದರೆ ನೀರು ನುಗ್ಗುತ್ತದೆ.

ADVERTISEMENT

ಈ ಎಲ್ಲ ಸಮಸ್ಯೆಗಳು ಕಂಡುಬಂದಿದ್ದು 14 ಮಕ್ಕಳನ್ನು ಹೊಂದಿರುವ, ತಿಂಗಳಿಗೆ ₹ 4,000 ಕಟ್ಟುವ ಬಾಡಿಗೆ ಅಂಗನವಾಡಿ ಕಟ್ಟಡದಲ್ಲಿ. ಇದೇ ರೀತಿ ಸ್ವಂತ ಕಟ್ಟಡಗಳಿಲ್ಲದೆ ಸಮುದಾಯ ಭವನ, ಮಹಿಳಾ, ಯುವಕ ಮಂಡಳಿ ಕಟ್ಟಡಗಳೇ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಸರೆಯಾಗಿವೆ. ಹಳೆಯ ಇಲ್ಲವೆ ಸೋರುವ ಕಟ್ಟಡಗಳಲ್ಲಿ ಅರೆಬರೆ ಪಾಠ ಕಲಿಯುವ ಪುಟಾಣಿಗಳಿಗೆ ಮೂಲಸೌಕರ್ಯ ಮಾತ್ರ ಗಗನ ಕುಸುಮ.

ರಾಜ್ಯದಲ್ಲಿ 24,403 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಮೂಲಸೌಕರ್ಯಗಳ ಕೊರತೆಯಲ್ಲೇ ಮಕ್ಕಳು ಅಕ್ಷರಾಭ್ಯಾಸ ಮಾಡುವ ಸ್ಥಿತಿ ತಲೆದೋರಿದೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಸ್ವಂತ ಕಟ್ಟಡಗಳ ಅಭಾವ ಹೆಚ್ಚಿದೆ. ಕೆಲವೆಡೆ ಮನೆಗಳನ್ನೇ ಬಾಡಿಗೆ ಪಡೆದುಕೊಂಡಿದ್ದರೆ, ಹಲವೆಡೆ ಶಾಲೆಗಳಲ್ಲಿ, ಪಂಚಾಯಿತಿ ಕಟ್ಟಡಗಳಲ್ಲಿ,ತಾತ್ಕಾಲಿಕ ವ್ಯವಸ್ಥೆಯಡಿ ಅಂಗನವಾಡಿ ಮುನ್ನಡೆಸಲಾಗುತ್ತದೆ.

ನಗರ, ಪಟ್ಟಣಗಳಲ್ಲಿ ಸಕಲ ಸೌಕರ್ಯವಿರುವ ಕಟ್ಟಡಗಳುಕಡಿಮೆ ಬಾಡಿಗೆಗೆ ಸಿಗುವುದಿಲ್ಲ. ಇಲ್ಲಿ ಕಟ್ಟಡ ಮಾಲೀಕರು ಮುಂಗಡ ಹಣಕ್ಕೆ ಲಕ್ಷಾಂತರ ರೂಪಾಯಿ ಕೇಳುತ್ತಾರೆ. ಆದರೆ, ಇಲಾಖೆಯು ಅನುದಾನಕ್ಕೆ ಸರಿ ಹೊಂದುವ ಮನೆಯನ್ನಷ್ಟೇಪಡೆಯಬೇಕಾಗುತ್ತದೆ. ಅವುಗಳು ಹಳೆಯ, ಸೋರುವ, ಚಿಕ್ಕ ಕಟ್ಟಡಗಳಾಗಿವೆ. ಇನ್ನೂ ಕೆಲವು ಸಂದಿಗೊಂದಿಗಳಲ್ಲಿ ಇರುತ್ತವೆ.

ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳೂ ಖಾಲಿ ಇವೆ. ಕೊಪ್ಪಳ, ಬೀದರ್‌, ರಾಯಚೂರು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಅಧಿಕವಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಫಲಾನುವಿಗಳಿಗೆ ಚಟುವಟಿಕೆಗಳನ್ನು ನಡೆಸಲು ಕಟ್ಟಡದ ಅಭಾವ ಅಡ್ಡಿಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೇ ಅಂಗನವಾಡಿ ಕೇಂದ್ರಗಳನ್ನು ಮುನ್ನಡೆಸಿಕೊಂಡು ಹೋಗುವ ಅನಿವಾರ್ಯತೆ ಕಾರ್ಯರ್ತೆಯರು, ಸಹಾಯಕಿಯರದ್ದಾಗಿದೆ.

ಜಾಗದ ಕೊರತೆ
ಕೇಂದ್ರಗಳ ಆರಂಭಕ್ಕೆ ಅನುದಾನದ ಕೊರತೆ ಇಲ್ಲ. ಜಾಗದ ಸಮಸ್ಯೆಯೇ ಹೆಚ್ಚು. ಹೀಗಾಗಿ, ಬಾಡಿಗೆ ಕಟ್ಟಡಗಳ ಮೊರೆ ಹೋಗಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜನವಸತಿ ಪ್ರದೇಶದಿಂದ ದೂರದಲ್ಲಿ ಸರ್ಕಾರಿ ಭೂಮಿ ಇರುತ್ತದೆ. ಅಂತಹ ಕಡೆ ಕಟ್ಟಡ ಕಟ್ಟಿದರೂ ಪ್ರಯೋಜನವಾಗುವುದಿಲ್ಲ. ಮಕ್ಕಳಿರುವ ಕಡೆ ನಿರ್ಮಿಸಿ, ಬಾಡಿಗೆ ಕಟ್ಟಡಗಳಿಂದ ಸ್ಥಳಾಂತರಿಸಲಾಗುತ್ತಿದೆ. ಹೀಗೆ ಹಂತ ಹಂತವಾಗಿ ನಿರ್ಮಿಸಲಾಗುವುದು ಎಂದರು.

ಅಂಗನವಾಡಿ ಕೇಂದ್ರಗಳಿಗೆ ಸೌಕರ್ಯ ಕಲ್ಪಿಸಲು ಮತ್ತು ಹಾಳಾಗಿರುವ ಉಪಕರಣಗಳ ದುರಸ್ತಿಗೆ ಬೇಕಾದ ಅನುದಾನ ಪ್ರತಿ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.