ADVERTISEMENT

Lalbagh Flower Show 2025: ಹೂವುಗಳ ಕಂಪು– ಮಹರ್ಷಿ ವಾಲ್ಮೀಕಿ ನೆನಪು

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 0:30 IST
Last Updated 17 ಜನವರಿ 2025, 0:30 IST
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು
ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲೀಗ ಕವಿ ಮಹರ್ಷಿ ವಾಲ್ಮೀಕಿಯ ಜಪ. ಇಲ್ಲಿನ ಗಾಜಿನಮನೆಯೊಳಗೊಂದು ಬೃಹತ್ ಹುತ್ತದ ಪ್ರತಿಕೃತಿ ತಲೆಯೆತ್ತಿದೆ. ಅದಕ್ಕೆ ಸಾವಿರಾರು ಬಣ್ಣ–ಬಣ್ಣದ ಹೂಗಳ ಸಿಂಗಾರ ಮಾಡಲಾಗಿದೆ. ಅದರ ಮುಂಭಾಗದಲ್ಲಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸುವ ಭಂಗಿಯ ಪ್ರತಿಮೆ ಪುಷ್ಪ ಪ್ರಿಯರ ಗಮನ ಸೆಳೆಯುತ್ತಿದೆ.

ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ‘ಆದಿಕವಿ ಮಹರ್ಷಿ ವಾಲ್ಮೀಕಿ’ ವಿಷಯ ಆಧಾರಿತ 217ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು. ಈ ಫಲಪುಷ್ಪ ಪ್ರದರ್ಶನವು ಜನವರಿ 16ರಿಂದ 27ರವರೆಗೆ ನಡೆಯಲಿದೆ.

ಗಾಜಿನ ಮನೆಯ ಕೇಂದ್ರ ಭಾಗದಲ್ಲಿ 10 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯ ಬೃಹತ್‌ ಹುತ್ತದ ಮಾದರಿ ನಿರ್ಮಿಸಲಾಗಿದೆ. ಹತ್ತು ದಿನಗಳ ಅವಧಿಯ ಪ್ರದರ್ಶನದಲ್ಲಿ ಒಂದು ಬಾರಿ ಇಲ್ಲಿನ ಹೂಗಳನ್ನು ಬದಲಿಸಲಾಗುತ್ತದೆ. ಒಟ್ಟು 3 ಲಕ್ಷ ಡಚ್‌ ಗುಲಾಬಿ, 800 ಕೆ.ಜಿ. ಪಿಂಚ್ಡ್‌ ಗುಲಾಬಿ, 600 ಕೆ.ಜಿ. ಹೈದರಾಬಾದ್ ಸೇವಂತಿಗೆ ಹೂವುಗಳನ್ನು ಹುತ್ತದ ಪ್ರತಿಕೃತಿ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

ADVERTISEMENT

ಹುತ್ತದ ಹಿಂಭಾಗದಲ್ಲಿ ರಾಮಾಯಣ ಮಹಾಕಾವ್ಯದಲ್ಲಿ ವನವಾಸದ  ಸಂದರ್ಭದಲ್ಲಿ ಪಂಚವಟಿಯಲ್ಲಿ ತಂಗಿದ್ದ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ 3ಡಿ ಕಲಾಕೃತಿಗಳು, ಹುಲ್ಲಿನ ಗುಡಿಸಲು ಮತ್ತು ಅರಣ್ಯ ಪರಿಸರದ ಮಾದರಿ ನಿರ್ಮಿಸಲಾಗಿದೆ. ಇದು ಮಕ್ಕಳು ಸೇರಿದಂತೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದು, ಸಾರ್ವಜನಿಕರು ಇದರ ಮುಂಭಾಗದಲ್ಲಿ ನಿಂತು ಫೋಟೊಗಳನ್ನು ತೆಗೆಸಿಕೊಳ್ಳುತ್ತಿದ್ದರು.

ಪುಷ್ಪಗಳಲ್ಲಿ ಅರಳಿದ ವಾಲ್ಮೀಕಿ ಆಶ್ರಮ:

ಗಾಜಿನ ಮನೆ ಕೇಂದ್ರ ಭಾಗದ ಎಡ ಬದಿಯಲ್ಲಿ ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನದ ತಮಸಾ, ಸೋನಾ ಮತ್ತು ಗಂಡಕಿ ನದಿಗಳ ತ್ರಿವೇಣಿ ಸಂಗಮದಲ್ಲಿರುವ ವಾಲ್ಮೀಕಿ ಆಶ್ರಮದ ಮಾದರಿಯನ್ನು ಹೂಗಳಲ್ಲಿ ನಿರ್ಮಿಸಲಾಗಿದೆ. 14 ಅಡಿ ಅಗಲ ಮತ್ತು 24 ಅಡಿ ಎತ್ತರವಿರುವ ಆಶ್ರಮದ ಮಾದರಿ ನಿರ್ಮಿಸಲು 1 ಲಕ್ಷ ಗುಲಾಬಿ ಹಾಗೂ ಶ್ವೇತ, ಹಳದಿ ಮತ್ತು ಚಾಕೊಲೇಟ್‌ ವರ್ಣದ ಸೇವಂತಿಗೆ ಸೇರಿದಂತೆ ಒಟ್ಟು 1.75 ಲಕ್ಷ ಆಕರ್ಷಕ ಹೂವುಗಳನ್ನು ಬಳಕೆ ಮಾಡಲಾಗಿದೆ. ಈ ಮಾದರಿ ನಿರ್ಮಿಸಲು ಎರಡು ಬಾರಿ ಒಟ್ಟು 5.5 ಲಕ್ಷ ಪುಷ್ಪಗಳನ್ನು ಬಳಕೆ ಮಾಡಿಲಾಗುತ್ತದೆ. ಈ ಪ್ರತಿಕೃತಿಯ ಮುಂಭಾಗದಲ್ಲಿ ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಗಾಜಿನ ಮನೆಯ ಹಿಂಭಾಗದಲ್ಲಿ ವಾಲ್ಮೀಕಿ ಪರಂಪರೆಯನ್ನು ಬಿಂಬಿಸುವ ಕನ್ನಡದ ನಾಗಚಂದ್ರ, ಕುಮುದೇಂದು, ‘ತೊರವೆ ರಾಮಾಯಣ’ ಕೃತಿಕಾರ ಕುಮಾರ ವಾಲ್ಮೀಕಿ, ಕುವೆಂಪು, ತಮಿಳಿನ ಕಂಬರ್, ತೆಲುಗಿನ ಗೊನ್ನಬುದ್ದರೆಡ್ಡಿ, ಹಿಂದಿಯ ತಳಸಿದಾಸ್, ಮಲಯಾಳದ ‘ಆಧ್ಯಾತ್ಮ ರಾಮಾಯಣಂ ಕಿಳಿಪ್ಪಟ್ಟು’ ಕೃತಿಕಾರ ತುಂಚತ್ತು ರಾಮಾನುಜನ್‌ ಎಝುತಾಚನ್ ಅವರ ಪುತ್ಥಳಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. 10 ಪುಷ್ಪ ಪಿರಮಿಡ್‌ಗಳಲ್ಲಿ ರಾಮಾಯಣ ಪಾತ್ರಧಾರಿಗಳ ಚಿತ್ರಗಳು ಕೈಬಿಸಿ ಕರೆದರೆ, ಮತ್ತೊಂದೆಡೆ ಹುನುಮ, ಜಾಂಬವಂತ, ಜಟಾಯು, ಅಳಿಲಿನ ಕಲಾಕೃತಿಗಳ ನೋಡುಗರನ್ನು ಸೆಳೆಯುತ್ತಿವೆ.

ಗಾಜಿನ ಮನೆಯ ಒಳಾಂಗಣದಲ್ಲಿ 60 ಫಲಕಗಳಲ್ಲಿ ವಾಲ್ಮೀಕಿ ಅವರ ಜೀವನ, ಸಾಧನೆ ಹಾಗೂ ರಾಮಾಯಣದ ಮಹಾಕಾವ್ಯದ ಮಾಹಿತಿಗಳನ್ನು ಪ್ರದರ್ಶಿಸಲಾಗಿದೆ.

ಮೂಲತಃ ನಾನು ಭಾರತದವಳು. ಆದರೆ ಇಂಗ್ಲೆಂಡಿನಲ್ಲಿ ನೆಲೆಸಿದ್ದೇನೆ. ನಾನು ಬೆಂಗಳೂರಿಗೆ ಹಲವಾರು ಬಾರಿ ಬಂದಿದ್ದೇನೆ. ಆದರೆ ಇದೇ ಮೊದಲ ಫಲಪುಷ್ಪ ಪ್ರದರ್ಶನ ವೀಕ್ಷಿಸುತ್ತಿದ್ದೇನೆ. ಒಂದೇ ವೇದಿಕೆಯಲ್ಲಿ ವಿವಿಧ ಬಣ್ಣದ ಹೂವುಗಳನ್ನು ನೋಡುತ್ತಿರುವುದು ಖುಷಿ ನೀಡಿದೆ.
ಮೀನಾಕ್ಷಿ, ಬ್ರಿಟನ್‌ ನಿವಾಸಿ
ವಾಲ್ಮೀಕಿ ಅವರ ಜೀವನದ ಸಂಪೂರ್ಣ ಮಾಹಿತಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗಿದೆ. ಪ್ರತಿಯೊಬ್ಬರೂ ಪ್ರದರ್ಶನಕ್ಕೆ ಭೇಟಿ ನೀಡಿ ಅವರ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಸೌಮ್ಯಾ ನಾಗರಬಾವಿ
ರಾಮಾಯಣ ಮಹಾಕಾವ್ಯ ಬರೆದಂತಹ ಮಹರ್ಷಿ ವಾಲ್ಮೀಕಿ ಅವರ ಜೀವನದ ವಿವಿಧ ಘಟನೆಗಳು ಅವರು ಕ್ರಮಿಸಿದ ಮಾರ್ಗಗಳ ಕುರಿತ ಮಾದರಿಗಳನ್ನು ಪುಷ್ಪಗಳ ಅನಾವರಣ ಮಾಡಲಾಗಿದೆ. ಶಾಲಾ–ಕಾಲೇಜಿನ ಮಕ್ಕಳು ಬಂದು ಈ ಪ್ರದರ್ಶನದ ಲಾಭ ಪಡೆದುಕೊಳ್ಳಬೇಕು.
ಅಮಿತ್ ನಾಗರಬಾವಿ
ವಾಲ್ಮೀಕಿ ರಾಮಾಯಣದ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಬಹಳ ಖುಷಿ ನೀಡಿದೆ. ರಾಮಾಯಣ ಮಹಾಕಾವ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ನಗರ ಪ್ರದೇಶದಲ್ಲಿ ಪ್ರಕೃತಿಯ ಸೊಬಗು ನೋಡಲು ಸಿಗುವುದೇ ಅಪರೂಪ. ಅಂತಹದರಲ್ಲಿ ಒಂದೇ ವೇದಿಕೆಯಲ್ಲಿ ಲಕ್ಷಾಂತರ ಹೂವುಗಳನ್ನು ನೋಡುತ್ತಿರುವುದು ಮನಸಿಗೆ ಮುದ ನೀಡುತ್ತದೆ.
ಸ್ವಪ್ನಾ, ಬಿಟಿಎಂಪಿ ಲೇಔಟ್
ಫಲಪುಷ್ಪ ಪ್ರದರ್ಶನ ನೋಡುವುದಕ್ಕೆ ಪ್ರತಿವರ್ಷ ಬರುತ್ತೇವೆ. ಈ ವರ್ಷ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆಯನ್ನು ಪುಷ್ಪಗಳಲ್ಲಿ ಅನಾವರಣ ಮಾಡಿದ್ದಾರೆ.  ಲಾಲ್‌ಬಾಗ್‌ನ ಪರಿಸರ ಮನಸಿಗೆ ನೆಮ್ಮದಿ ನೀಡುತ್ತದೆ. ಮಧ್ಯಪ್ರದೇಶದಲ್ಲಿರುವ ನಮ್ಮ ಸಂಬಂಧಿಕರು ಈ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದಿದ್ದಾರೆ.
ಕೃಷ್ಣವೇಣಿ, ಇಸ್ರೊ ಲೇಔಟ್
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು
ತೋಟಗಾರಿಕೆ ಇಲಾಖೆ ಆಯೋಜಿಸಿರುವ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಹರಿಹರದ ಪಂಚಮಸಾಲಿಪೀಠದ ವಚನಾನಂದ ಸ್ವಾಮೀಜಿ ಸಚಿವರಾದ ರಾಮಲಿಂಗಾರೆಡ್ಡಿ ಜಮೀರ್ ಅಹ್ಮದ್ ಖಾನ್ ಎಸ್.ಎಸ್. ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.