ADVERTISEMENT

ಸದಾಶಿವ ಆಯೋಗ ವರದಿ ಚರ್ಚಿಸದೆ ಜಾರಿ ಬೇಡ: ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 21:19 IST
Last Updated 10 ಮಾರ್ಚ್ 2021, 21:19 IST
ಪ್ರತಿಭಟನೆ ವೇಳೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿದರು
ಪ್ರತಿಭಟನೆ ವೇಳೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿದರು   

ಬೆಂಗಳೂರು: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ವರದಿಯಲ್ಲಿ ಸಮಗ್ರವಾಗಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ. ಇದರ ಸಾಧಕ–ಬಾಧಕಗಳನ್ನು ಬಹಿರಂಗವಾಗಿ ಚರ್ಚಿಸದೆ ಅದರ ಜಾರಿಗೆ ಸರ್ಕಾರ ಮುಂದಾಗಬಾರದು’ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಹೇಳಿದರು.

ನಗರದ ಮೌರ್ಯ ವೃತ್ತದಲ್ಲಿ ಒಕ್ಕೂಟದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಚಿಂತಕಿ ಬಿ.ಟಿ. ಲಲತಾ ನಾಯಕ್‌, ‘ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ವರದಿಯನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಸರ್ಕಾರ ಈವರೆಗೆ ವರದಿಯನ್ನು ಬಹಿರಂಗ ಚರ್ಚೆಗೆ ಬಿಟ್ಟಿಲ್ಲ. ವರದಿಯನ್ನು ತಿರುಚಲಾಗಿದೆ ಎಂಬ ಸುದ್ದಿ ಇವೆ. ಚಲವಾದಿ, ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಇತ್ಯಾದಿ ಪರಿಶಿಷ್ಟ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ ಎಂಬ ಮಾಹಿತಿಯೂ ಇದೆ. ವರದಿಯ ಸತ್ಯಾಸತ್ಯತೆ ಬಹಿರಂಗವಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಒಂದು ಸಮುದಾಯವನ್ನು ಓಲೈಸಲು, ಇತರೆ 99 ಜಾತಿಗಳಿಗೆ ಅನ್ಯಾಯ ಮಾಡುವುದು, ಅಪಮಾನಿಸುವುದು ಸರಿಯಲ್ಲ. ಶ್ರೀರಾಮುಲು ಅವರು ತಮ್ಮ ಏಕಪಕ್ಷೀಯ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ನಮ್ಮ ಸಮುದಾಯಗಳ ಕ್ಷಮೆ ಕೇಳಬೇಕು’ ಎಂದು ಒಕ್ಕೂಟದ ಸದಸ್ಯರು ಆಗ್ರಹಿಸಿದರು.

ಈ ಕುರಿತ ಮನವಿ ಪತ್ರವನ್ನು ಮುಖ್ಯಮಂತ್ರಿ ಗೃಹಕಚೇರಿಯ ವಿಶೇಷ ಅಧಿಕಾರಿ ಸತೀಶ್ ಅವರಿಗೆ ನೀಡಲಾಯಿತು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, ರವಿ ಮಾಕಳಿ, ರಾಘವೇಂದ್ರ ನಾಯ್ಕ್, ಅನಂತ್ ನಾಯ್ಕ್, ಡಾ.ರಾಜಾ ನಾಯ್ಕ್, ವಿಜಯ್ ಜಾಧವ್, ಪ್ರೊ.ಹರೀಶ್, ಸಿದ್ಯಾ ನಾಯ್ಕ್, ತೋತ್ಯಾ ನಾಯ್ಕ್, ರಮೇಶ್ ಚಹ್ವಾಣ್, ವಿನೋದ್ ಕುಮಾರ್, ವೆಂಕಟೇಶ್ ಬಂಜಾರ, ಅನಿಲ್ ನಾಯ್ಕ್, ಪಂಕಜಾ ನಾಯ್ಕ್, ಮಾಲಾ ಬಾಯಿ, ಪ್ರೊ.ಹರೀಶ್ ಲಂಬಾಣಿ, ಗುರುಪ್ರಸಾದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.