
ಕೆಂಗೇರಿ: ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಜನವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಬೃಂದಾವನ ನಗರದ ನಿವಾಸಿಗಳು ಅಬಕಾರಿ ಅಧಿಕಾರಿಗಳು ಹಾಗೂ ಬಾರ್ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿದರು.
ದೊಡ್ಡ ಬಿದರಕಲ್ಲು ವಾರ್ಡ್ ವ್ಯಾಪ್ತಿಯ ತಿಪ್ಪೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಬೃಂದಾವನ ನಗರ ಎರಡನೇ ಹಂತದಲ್ಲಿ ಬಾರ್ ತೆಗೆಯಲು ಸಿದ್ಧತೆ ನಡೆಯುತ್ತಿದೆ. ಬಾರ್ ಆರಂಭಗೊಂಡರೆ ಈ ಭಾಗದಲ್ಲಿ ಹೆಣ್ಣು ಮಕ್ಕಳು ಓಡಾಡದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪುಂಡರು ಪೋಕರಿಗಳ ಹಾವಳಿ ಹೆಚ್ಚಾಗಲಿದೆ. ನಾಗರಿಕರ ಹಿತ ಮರೆತು ಜನವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಅನುಮತಿ ನೀಡುವುದು ಕಾನೂನು ಬಾಹಿರ ಎಂದು ಸ್ಥಳೀಯ ನಾಗರಿಕರು ಆರೋಪಿಸಿದರು.
ಬಾರ್ ಆರಂಭಗೊಂಡರೆ ದಿನವಿಡೀ ದುಡಿದು ಮನೆಗೆ ಬರುವ ಮಹಿಳೆಯರು, ನಿರ್ಭೀತಿಯಿಂದ ಓಡಾಡಲು ತೊಂದರೆಯಾಗಲಿದೆ ಎಂದು ಸ್ಥಳೀಯ ನಿವಾಸಿ ಶ್ಯಾಮಲ ಆತಂಕ ವ್ಯಕ್ತಪಡಿಸಿದರು. ಪಕ್ಕದಲ್ಲೇ ಇತಿಹಾಸ ಪ್ರಸಿದ್ಧ ಕಾಟಮರಾಯನ ಗುಡಿ ಇದೆ. ವಿಶೇಷ ದಿನಗಳಲ್ಲಿ ಸಾವಿರಾರು ಮಂದಿ ಭಕ್ತರು ಸೇರುತ್ತಾರೆ. ಧಾರ್ಮಿಕ ಚಟುವಟಿಕೆಗೆ ಬಾರ್ ತೊಡಕಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಟ್ಟಡ ಅನಧಿಕೃತವಾಗಿ ನಿರ್ಮಾಣಗೊಂಡಿದೆ. ಆ ಕಟ್ಟಡದಲ್ಲಿ ಬಾರ್ ಆರಂಭಿಸಲು ಜನಹಿತ ಮರೆತು, ಹಣಕ್ಕಾಗಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಎಂದು ಸ್ಥಳೀಯ ಮುಖಂಡ ಟ್ರಾವೆಲ್ಸ್ ಮಂಜನಾಥ್ ಆರೋಪಿಸಿದರು. ಬಾರ್ ಆರಂಭಿಸುವ ನಿರ್ಧಾರವನ್ನು ಕೈಬಿಡದಿದ್ದರೆ ಅಧಿಕಾರಿಗಳು ಹಾಗೂ ಬಾರ್ ಮಾಲೀಕರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳೀಯ ನಿವಾಸಿಗಳಾದ ವಾಸು, ವಿಜಯ್ ಕುಮಾರ್, ಮಹೇಶ್ ಕುಮಾರ್, ಶ್ರೀನಿವಾಸ್ ಮೂರ್ತಿ, ನಟರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.