
ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಹತ್ತನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಒಟ್ಟು 4679 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಪೈಕಿ 3409 ಪದವಿ, 1194 ಸ್ನಾತಕೋತ್ತರ ಪದವಿ ಹಾಗೂ 77 ಪಿಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರ ಜೊತೆಗೆ 70 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ‘ವಿದ್ಯಾರ್ಥಿಗಳು ಪ್ರಶ್ನೆ ಕೇಳಿಕೊಳ್ಳುವ ಉತ್ಸಾಹ ಹಾಗೂ ಚೈತನ್ಯವನ್ನು ಉಳಿಸಿಕೊಳ್ಳಬೇಕು. ಮುಂದೇನು? ಬೇರೆ ಏನು ಬಾಕಿ ಇದೆ? ಹಾಗೂ ಹೆಚ್ಚು ಏನು ಬೇಕಿದೆ? ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ ಕುತೂಹಲ, ನಿರಂತರ ಸುಧಾರಣೆ ನಿಮ್ಮಲ್ಲಿ ರೂಢಿಸುತ್ತದೆ ಎಂದರು.
ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಮಾನವೀಯ ಗುಣಗಳು ಬಹಳ ಮುಖ್ಯ. ಈ ಮೌಲ್ಯಗಳು ಉದ್ದೇಶ ಹಾಗೂ ದೈವತ್ವದ ಮಾರ್ಗದರ್ಶನ ಪಡೆದುಕೊಂಡಲ್ಲಿ ನೈತಿಕವಾಗಿ ಗಟ್ಟಿಯಾಗಿ ನಿಲ್ಲುವಂತೆ ವ್ಯಕ್ತಿಗಳನ್ನು ಸಬಲಗೊಳಿಸುತ್ತವೆ ಎಂದು ತಿಳಿಸಿದರು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದು ಮಾತ್ರವಲ್ಲದೆ ಬದುಕಿಗಾಗಿ ಪಾಠ ಕಲಿಯುವುದಾಗಿದೆ. ಇದರ ಜೊತೆಗೆ ನಾವೀನ್ಯಕಾರರು, ಉದ್ಯಮಿಗಳು ಹಾಗೂ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವಿರುವ ವೃತ್ತಿಪರರನ್ನು ಪೋಷಿಸುವುದಕ್ಕೆ ಸಂಸ್ಥೆಯು ಸದಾ ಬದ್ಧವಾಗಿದೆ’ ಎಂದರು.
ಕುಲಪತಿ ಡಾ ಸಂಜಯ್ ಆರ್.ಚಿಟ್ನಿಸ್, ಸಹ ಕುಲಪತಿ ಉಮೇಶ್ ಎಸ್.ರಾಜು, ಕುಲಸಚಿವ ಡಾ.ಎಂ.ಧನಂಜಯ, ಕುಲಸಚಿವೆ (ಮೌಲ್ಯಮಾಪನ)ಡಾ.ಬೀನಾ.ಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.