ADVERTISEMENT

ಕಂದಾಯ ಅಧಿಕಾರಿಗಳ ಅಮಾನತು: ಮೇಣದ ದೀಪ ಹಚ್ಚಿ, ಮೌನ ಪ್ರತಿಭಟನೆ

ಐದೂ ನಗರ  ಪಾಲಿಕೆಗಳಲ್ಲಿ ಕಪ್ಪುಬಟ್ಟೆ ಧರಿಸಿ ಕಾರ್ಯನಿರ್ವಹಿಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 15:52 IST
Last Updated 22 ಡಿಸೆಂಬರ್ 2025, 15:52 IST
ಜಿಬಿಎ ಕೇಂದ್ರ ಕಚೇರಿ ಮುಂದೆ ಐದೂ ನಗರ ಪಾಲಿಕೆಗಳ ಸಿಬ್ಬಂದಿ ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ ನಡೆಸಿದರು
ಜಿಬಿಎ ಕೇಂದ್ರ ಕಚೇರಿ ಮುಂದೆ ಐದೂ ನಗರ ಪಾಲಿಕೆಗಳ ಸಿಬ್ಬಂದಿ ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಕಂದಾಯ ವಿಭಾಗದ ಅಧಿಕಾರಿಗಳನ್ನು ಕಾನೂನುಬಾಹಿರವಾಗಿ ಅಮಾನತು ಮಾಡಲು ಜಿಬಿಎ ಮುಂದಾಗಿದೆ ಎಂದು ಆರೋಪಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ– ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಾಲಿಕೆಗಳ ಸಿಬ್ಬಂದಿ ಸೋಮವಾರ ಮೌನ ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಿಗ್ಗೆಯಿಂದ ಐದೂ ನಗರ ಪಾಲಿಕೆಗಳಲ್ಲಿ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಪಾಲಿಕೆಗಳ ಸಿಬ್ಬಂದಿ, ಜಿಬಿಎ ಕೇಂದ್ರ ಕಚೇರಿ ಮುಂದೆ ಸಂಜೆ ಮೇಣದ ದೀಪ ಹಚ್ಚಿ, ಮೌನ ಪ್ರತಿಭಟನೆ ಮಾಡಿದರು.

‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ, ಅಧಿಕಾರಿ, ನೌಕರರನ್ನು ಕಾನೂನು ಬಾಹಿರವಾಗಿ ಮಟ್ಟ ಹಾಕುವುದನ್ನು ಖಂಡಿಸಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ಕಂದಾಯ ವಿಭಾಗಕ್ಕೆ ಇಂದು ಕರಾಳ ದಿನವಾಗಿದೆ. ಸಾಂಕೇತಿಕವಾಗಿ ನಮ್ಮ ಹೋರಾಟ ಪ್ರಾರಂಭವಾಗಿದೆ’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಹೇಳಿದರು.

ADVERTISEMENT

‘ಖಾತಾ ವಿತರಣೆ ಪ್ರಕ್ರಿಯೆಯಲ್ಲಿ ರಾಂಡ್ ರಾಬಿನ್ ಎಂಬ ಅವೈಜ್ಞಾನಿಕ ಪದ್ದತಿಯಿಂದ ಅಧಿಕಾರಿಗಳು ಕಿರುಕುಳ ಅನುಭವಿಸುತ್ತಿದ್ದಾರೆ. ಲೋಕಾಯುಕ್ತ ತನಿಖೆ, ನ್ಯಾಯಾಲಯದಲ್ಲಿ ಪ್ರಕರಣಗಳಿರುವ ಸಂದರ್ಭದಲ್ಲಿ ಖಾತೆ ಮಾಡಲು ಬರುವುದಿಲ್ಲ. ಆದರೆ, ಅಂತಹ ಸಾವಿರಾರು ಪ್ರಕರಣಗಳಲ್ಲಿ ಖಾತೆ ಆಗಿಲ್ಲ. ಇಂತಹ ಎರಡು ಪ್ರಕರಣಗಳಲ್ಲಿ ಇಬ್ಬರ ಮೇಲೆ ದ್ವೇಷ ಸಾಧಿಸಲು ಅಮಾನತು ಮಾಡುವಂತೆ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಹಾಗೂ ಜಂಟಿ ಆಯುಕ್ತರು ಶಿಫಾರಸು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಐದು ನಗರ ಪಾಲಿಕೆಗಳಲ್ಲಿ 12 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಮೂರು ವರ್ಷಗಳಿಂದ ಸತತ ಕಿರುಕುಳ ನೀಡಲಾಗುತ್ತಿದೆ. ನಗರದ ಜನರಿಗೆ ತೊಂದರೆಯಾಗಬಾರದು ಎಂದು ಮೌನವಾಗಿ ಕಂದಾಯ ವಿಭಾಗದ ಅಧಿಕಾರಿ– ಸಿಬ್ಬಂದಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ನಾವು ಕೆಲಸ ಮಾಡುತ್ತಿದ್ದೇವೆ, ನಮಗೆ ನ್ಯಾಯ ಕೊಡಬೇಕು, ಅಮಾನತು ಪ್ರಸ್ತಾವ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.