ADVERTISEMENT

ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ: ಮುಖ್ಯ ರಸ್ತೆ ಗರಿಗರಿ, ಅಡ್ಡರಸ್ತೆ ಕಿರಿಕಿರಿ

ಮುಗಿಯದ 110 ಹಳ್ಳಿ ಯೋಜನೆ ಕಾಮಗಾರಿ; ತಪ್ಪದ ನಿವಾಸಿಗಳ ಗೋಳು

ವಿಜಯಕುಮಾರ್ ಎಸ್.ಕೆ.
Published 9 ಜುಲೈ 2021, 22:34 IST
Last Updated 9 ಜುಲೈ 2021, 22:34 IST
ಕಲ್ಕೆರೆ ಪಾಪಣ್ಣ ಬಡಾವಣೆ ರಸ್ತೆಯಲ್ಲಿ ಒಳಚರಂಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು
ಕಲ್ಕೆರೆ ಪಾಪಣ್ಣ ಬಡಾವಣೆ ರಸ್ತೆಯಲ್ಲಿ ಒಳಚರಂಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು   

ಬೆಂಗಳೂರು: ಮುಖ್ಯ ರಸ್ತೆಗಳು ಹೊಸದಾಗಿ ಡಾಂಬರು ಕಂಡು ಗರಿಗರಿಯಾಗಿದ್ದರೆ, ಅಡ್ಡರಸ್ತೆಗಳಲ್ಲಿ ಇದ್ದ ಡಾಂಬರು ಕೂಡ ಮಾಯವಾಗಿದೆ. ಗುಂಡಿ ಬಿದ್ದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಪರದಾಟ...

ಇದು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 11 ಹಳ್ಳಿಗಳ ಸ್ಥಿತಿ. 110 ಹಳ್ಳಿ ಯೋಜನೆಯಡಿ ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ಕೆಲವೆಡೆ ನಡೆಯುತ್ತಿದೆ. ರಸ್ತೆ ಮರು ನಿರ್ಮಾಣ ಕಾಮಗಾರಿ ಸದ್ಯ ಬಾಕಿ ಇದೆ.

ಕಲ್ಕೆರೆ, ಹೊರಮಾವು, ಅಗರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 110 ಹಳ್ಳಿ ಯೋಜನೆ ಅನುದಾನ ಬಿಡುಗಡೆಗೂ ಮುನ್ನವೇ ಬೇರೆ–ಬೇರೆ ಅನುದಾನದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಬಡಾವಣೆಗೆ ಸಂಪರ್ಕ ಕಲ್ಪಿಸುವ ಕಿರಿದಾದ ಮತ್ತು ಅಡ್ಡರಸ್ತೆಗಳ ಸ್ಥಿತಿ ಸಂಚಾರಕ್ಕೆ ಯೋಗ್ಯವಿಲ್ಲದೆ ಜನರ ಪರದಾಟ ಹೇಳ ತೀರದಾಗಿದೆ.

ADVERTISEMENT

ಒಳಚರಂಡಿ ಕಾಮಗಾರಿ ಮುಗಿದಿರುವುದಕ್ಕೆ ಸಾಕ್ಷಿ ಎಂಬಂತೆ ಮ್ಯಾನ್‌ಹೋಲ್‌ಗಳು ರಸ್ತೆಗಳಲ್ಲಿ ಎದ್ದು ನಿಂತಿವೆ. ವರ್ಷಗಟ್ಟಲೆಯಿಂದ ಕಾಮಗಾರಿ ನಡೆಯುತ್ತಿರುವ ಕಾರಣ ಸಂಚಾರ ಮಾಡಲು ಸಾಧ್ಯವಾಗದೆ ಜನ ರೋಸಿ ಹೋಗಿದ್ದಾರೆ. ‘ಕಾಮಗಾರಿ ಯಾವಾಗ ಮುಗಿಯುವುದೋ ಗೊತ್ತಿಲ್ಲ. ಇನ್ನೇನು ಕೆಲಸ ಮುಗಿಯಿತು ಎಂದುಕೊಂಡರೆ ಜಲ ಮಂಡಳಿಯವರು ಮತ್ತೆ ಮತ್ತೆ ಅಗೆದು ಹಾಳು ಮಾಡುತ್ತಿದ್ದಾರೆ’ ಎಂದು ಕಲ್ಕೆರೆ ಪಾಪಣ್ಣ ಬಡಾವಣೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಕಲ್ಕೆರೆ ಮತ್ತು ಕೆ. ಚನ್ನಸಂದ್ರದಲ್ಲೂ ಮುಖ್ಯ ರಸ್ತೆಗೆ ಹೊಸದಾಗಿ ಡಾಂಬರು ಹಾಕಲಾಗಿದೆ. ಆ ರಸ್ತೆ ಮುಂದುವರಿದು ಬಿಳಿಶಿವಾಲೆ, ಬೈರತಿ ಮಾರ್ಗದಲ್ಲಿ ಹೆಣ್ಣೂರು ಮುಖ್ಯ ರಸ್ತೆಯನ್ನು ಸಂಪರ್ಕಿಸುತ್ತದೆ. ಕೆ. ಚನ್ನಸಂದ್ರ ದಾಟಿದ ಕೂಡಲೇ ಮುಖ್ಯ ರಸ್ತೆ ಇದೆಯೋ ಇಲ್ಲವೋ ಎಂಬಂತೆ ಭಾಸವಾಗುತ್ತಿದೆ. ಕೆರೆಯ ಏರಿಯ ಎರಡೂ ಬದಿಯಲ್ಲಿ ಕಸದ ರಾಶಿ, ಸಂಚರಿಸಲು ಸಾಧ್ಯವೇ ಆಗದಷ್ಟು ಗುಂಡಿ ಬಿದ್ದ ರಸ್ತೆ ಇದೆ. ಕೆ.ಆರ್.ಪುರ ಕ್ಷೇತ್ರ ಕೆ.ಚನ್ನಸಂದ್ರಕ್ಕೆ ಮುಕ್ತಾಯವಾಗುವ ಕಾರಣ ಮುಂದಿನ ಊರುಗಳ ರಸ್ತೆ ಅಭಿವೃದ್ಧಿ ಕಂಡಿಲ್ಲ.

‘ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರು ಪ್ರಭಾವಿ ಸಚಿವರಾಗಿರುವ ಕಾರಣ ರಸ್ತೆ ಮರು ನಿರ್ಮಾಣಕ್ಕೆ ₹190 ಕೋಟಿ ಅನುದಾನ ತಂದಿದ್ದಾರೆ. ಕೆಲವು ತಿಂಗಳುಗಳಲ್ಲೇ ಬಹುತೇಕ ಎಲ್ಲ ಸಣ್ಣಪುಟ್ಟ ರಸ್ತೆಗಳೂ ಡಾಂಬರು ಕಾಣವ ಸಾಧ್ಯತೆ ಇದೆ’ ಎನ್ನುತ್ತಾರೆ ಸ್ಥಳೀಯರು.

ಕಲ್ಕೆರೆ ಗೋಪಾಲಪ್ಪ ಲೇಔಟ್‌ನಲ್ಲಿ ಒಳಚಂಡಿ ಕಾಮಗಾರಿ ಮುಗಿದು ರಸ್ತೆ ಅಭಿವೃದ್ಧಿಪಡಿಸಿರುವುದು –ಪ್ರಜಾವಾಣಿ ಚಿತ್ರಗಳು/ಎಂ.ಎಸ್.ಮಂಜುನಾಥ್

ತಿಂಗಳಲ್ಲಿ ಕಾಮಗಾರಿ ಪೂರ್ಣ
‘ರಸ್ತೆಗಳ ಮರು ನಿರ್ಮಾಣಕ್ಕೆ ಸರ್ಕಾರದಿಂದ ₹190 ಕೋಟಿ ಅನುದಾನ ದೊರೆತಿದೆ. ಸದ್ಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘11 ಹಳ್ಳಿಗಳ ವ್ಯಾಪ್ತಿಯ ಮುಖ್ಯ ರಸ್ತೆಗಳೆಲ್ಲವೂ ಅಭಿವೃದ್ಧಿಯಾಗಿವೆ. ಉಳಿದಿರುವ ಎಲ್ಲ ಅಡ್ಡರಸ್ತೆಗಳ ಮರು ಡಾಂಬರೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಕಾಮಗಾರಿ ಆರಂಭವಾದರೆ ಒಂದು ತಿಂಗಳಲ್ಲಿ ಎಲ್ಲ ರಸ್ತೆಗಳು ಸಂಚಾರ ಯೋಗ್ಯವಾಗಲಿವೆ’ ಎಂದು ತಿಳಿಸಿದರು.

110 ಹಳ್ಳಿ ಯೋಜನೆ ಕಾಮಗಾರಿ ಕುರಿತು ಸಚಿವ ಬೈರತಿ ಬಸವರಾಜ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಯಾವ್ಯಾವ ಹಳ್ಳಿಯಲ್ಲಿ ಕಾಮಗಾರಿ
ನಾಗರೇಶ್ವರ ನಾಗೇನಹಳ್ಳಿ, ಕೊತ್ತನೂರು, ಕೆ.ನಾರಾಯಣಪುರ, ಗೆದ್ದಲಹಳ್ಳಿ, ಕ್ಯಾಲಸನಹಳ್ಳಿ, ಅಗರ, ಬಾಬುಸಪಾಳ್ಯ, ಹೊರಮಾವು, ಹೊಯ್ಸಳನಗರ, ಕಲ್ಕರೆ, ಕೆ. ಚನ್ನಸಂದ್ರ

*
ಮುಖ್ಯ ರಸ್ತೆಗಳಲ್ಲೂ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗಿದೆ. ಅಗೆದಿದ್ದ ರಸ್ತೆಗಳನ್ನು ಈಗ ಮರು ನಿರ್ಮಾಣ ಮಾಡಲಾಗುತ್ತಿದೆ. ಮುಖ್ಯ ರಸ್ತೆ ಅಭಿವೃದ್ಧಿಯಾಗಿರುವ ಕಾರಣ ಸಂಚಾರಕ್ಕೆ ಇದ್ದ ಕಷ್ಟ ತಪ್ಪಿದೆ.
–ನಾಗರಾಜ್, ಕಲ್ಕೆರೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.