ADVERTISEMENT

‘ಸೇಫ್‌ ಸಿಟಿ’: ಟೆಂಡರ್‌ ರದ್ದತಿಗೆ ಒತ್ತಾಯ

₹667 ಕೋಟಿ ಮೊತ್ತದ ಯೋಜನೆ ಕುರಿತು ಅಪ‍ಸ್ವರ * ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬಿಇಎಲ್‌ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 22:45 IST
Last Updated 11 ಜನವರಿ 2020, 22:45 IST
   

ಬೆಂಗಳೂರು: ನಿರ್ಭಯಾ ಅನುದಾನದಡಿ ಅನುಷ್ಠಾನಗೊಳಿಸುತ್ತಿರುವ ‘ಸೇಫ್‌ ಸಿಟಿ ಯೋಜನೆ’ಗೆ ಕೊಳ್ಳಲು ಉದ್ದೇಶಿಸಿರುವ ಸರ್ವೇಕ್ಷಣಾ ಉಪಕರಣಗಳಿಗೆ ನಿರ್ದಿಷ್ಟಪಡಿಸಿರುವ ಮಾನದಂಡ ಕಳಪೆಯಾಗಿವೆ ಎಂದು ಸರ್ಕಾರಿ ಸ್ವಾಮ್ಯದ ಬಿಇಎಲ್‌ ಸೇರಿದಂತೆ ಅನೇಕ ಉದ್ಯಮ ಸಂಸ್ಥೆಗಳು ಅಪಸ್ವರ ತೆಗೆದಿವೆ.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹667 ಕೋಟಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ತಿಂಗಳ ಬಳಿಕ ಬೆಂಗಳೂರು ಪೊಲೀಸರು ಅಗತ್ಯವಿರುವ ಸರ್ವೇಕ್ಷಣಾ ಉಪಕರಣ ಖರೀದಿಸಲು ಟೆಂಡರ್‌ ಕರೆದಿದ್ದರು. ನವೆಂಬರ್‌ 19ರಂದು ಸೇರಿದ್ದ ಟೆಂಡರ್‌ ಪೂರ್ವಭಾವಿ ಸಭೆಯಲ್ಲಿ 100 ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಂಬಂಧ ಒಟ್ಟಾರೆ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಸ್ಪಷ್ಟನೆಗಳನ್ನು ಕೇಳಲಾಗಿತ್ತು. ಆದರೆ, ಅಧಿಕಾರಿಗಳು ಪ್ರತಿಕ್ರಿಯೆ ನೀಡಲಿಲ್ಲ ಎಂದು ಉದ್ಯಮಿಗಳು ಆರೋಪಿಸಿದ್ದಾರೆ. ಟೆಂಡರ್‌ಗೆ ಆಕ್ಷೇಪ ವ್ಯಕ್ತಪಡಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ ಅವರಿಗೆ ಬಿಇಎಲ್‌ ಪತ್ರ ಬರೆದಿದೆ.

ADVERTISEMENT

‘ಈ ಯೋಜನೆಯಡಿ ಕೊಳ್ಳಲು ಉದ್ದೇಶಿಸಿರುವ ಉಪಕರಣಗಳಿಗೆ ನಿಗದಿಪಡಿಸಿರುವ ಮಾನದಂಡವು ಒಂದೆರಡು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೂಡಿದೆ’ ಎಂದು ಅದು ಆರೋಪಿಸಿದೆ.

ಪೊಲೀಸರು ನಿಗದಿಪಡಿಸಿರುವ ಮಾನದಂಡಗಳು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಮಾರ್ಗಸೂಚಿಗಳ ಉಲ್ಲಂಘನೆಯೂ ಆಗಿದೆ. ಅಲ್ಲದೆ, ಈ ತರಹದ ಯೋಜನೆಗಳಿಗೆ ಉಪಕರಣ ಪೂರೈಸುವಲ್ಲಿ ಸಾಕಷ್ಟು ಅನುಭವ ಹೊಂದಿರುವ ಬಿಇಎಲ್‌ಗೆ ಇದು ತೊಡಕಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಟೆಂಡರ್‌ನಲ್ಲಿ ಹೆಚ್ಚಿನ ಕಂಪನಿಗಳು ಭಾಗವಹಿಸಲು ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡುವಂತೆಯೂ ಒತ್ತಾಯಿಸಲಾಗಿದೆ. ಗೃಹ ಇಲಾಖೆಯ ಮೂಲಗಳು ಬಿಇಎಲ್‌ ಪತ್ರ ಬರೆದಿರುವುದನ್ನು ಖಚಿತಪಡಿಸಿವೆ.

ಟೆಂಡರ್‌ನಲ್ಲಿ ನಿಗದಿಪಡಿಸಿರುವ ಮಾನದಂಡ ಗಮನಿಸಿದರೆ ಕ್ಯಾಮೆರಾದಲ್ಲಿ ಶೇ 50ರಷ್ಟು ಮಾತ್ರ ನಿಖರತೆ ಸಾಧ್ಯವಾಗಲಿದೆ. ಆದರೆ, ಬೇರೆ ರಾಜ್ಯಗಳಲ್ಲಿ ಶೇ 90 ರಷ್ಟು ನಿಖರ ಫಲಿತಾಂಶ ದೊರೆಯುವ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಟೆಂಡರ್‌ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಮೂರು ಆರ್ಥಿಕ ವರ್ಷದಲ್ಲಿ ₹300 ಕೋಟಿ ವಹಿವಾಟು ನಡೆಸಿರುವ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಬಹುದು ಎಂದು ಹೇಳಲಾಗಿದೆ. ಯೋಜನೆಯ ಒಟ್ಟು ಮೊತ್ತ ₹600 ಕೋಟಿಗೂ ಅಧಿಕವಾಗಿದ್ದು, ಅರ್ಧದಷ್ಟು ವಹಿವಾಟು ನಡೆಸುತ್ತಿರುವ ಕಂಪನಿಗೆ ಉಪಕರಣಗಳನ್ನು ಪೂರೈಸಲು ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ಟೆಂಡರ್‌ ರದ್ದುಪಡಿಸಬೇಕು. ಇಲ್ಲವೆ ಉಪಕರಣಗಳಿಗೆ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಏನೇ ದೂರುಗಳಿದ್ದರು ಉದ್ಯಮಿಗಳು ತಮ್ಮನ್ನು ಸಂಪರ್ಕಿಸಬಹುದು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಹೇಳಿದ್ದಾರೆ. ಎಸಿಎಸ್‌ ಈ ವಿಷಯದಲ್ಲಿ ಮೇಲ್ಮನವಿ ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದಾರೆ.

*
ಅತ್ಯುತ್ತಮ ಗುಣಮಟ್ಟದ ಸರ್ವೇಕ್ಷಣಾ ಉಪಕರಣ ಖರೀದಿಸಲಾಗುತ್ತಿದೆ. ಉತ್ತಮವಾಗಿರದ ಉಪಕರಣಗಳನ್ನು ತಿರಸ್ಕರಿಸಲಾಗುವುದು
–ಭಾಸ್ಕರ್ ರಾವ್‌, ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.