
ಬೆಂಗಳೂರು: ‘ಸಮಾಜಮುಖಿ’ ಪತ್ರಿಕೆ ವತಿಯಿಂದ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆವರಣದಲ್ಲಿ ಇದೇ ಶನಿವಾರ (ನ.8) ಮತ್ತು ಭಾನುವಾರ (ನ.9) ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಹಂಪ ನಾಗರಾಜಯ್ಯ, ‘ಕನ್ನಡ ಸಾಹಿತ್ಯದ ಹಿಂದಣ ಹೆಜ್ಜೆಯನ್ನು ಅರಿಯುತ್ತಾ, ಸಮಕಾಲೀನ ಹಾಗೂ ಭವಿಷ್ಯದ ನೆಲೆ–ಬೆಲೆಗಳನ್ನು ಗುರುತಿಸಲು ಈ ಸಮ್ಮೇಳನ ಸಹಕಾರಿಯಾಗಲಿದೆ. ಸಾಹಿತಿಗಳು, ಚಿಂತಕರು, ಕಲಾವಿದರು, ಸಾಹಿತ್ಯಾಸಕ್ತರು, ಸಾಹಿತ್ಯ ವಿದ್ಯಾರ್ಥಿಗಳನ್ನು ಒಳಗೊಂಡು ಈ ಸಮ್ಮೇಳನ ನಡೆಸಲಾಗುತ್ತಿದೆ. ಮುಖ್ಯ ವೇದಿಕೆಯ ಜತೆಗೆ ನಾಲ್ಕು ಸಮಾನಾಂತರ ವೇದಿಕೆಗಳು ಇರಲಿದ್ದು, ಒಟ್ಟು 47 ಚರ್ಚಾಗೋಷ್ಠಿಗಳು ನಡೆಯಲಿವೆ. 225ಕ್ಕೂ ಅಧಿಕ ಲೇಖಕರು, ಚಿಂತಕರು ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದರು.
‘ಸಮ್ಮೇಳನದ ಮೊದಲ ದಿನ ‘ಹಳಗನ್ನಡ ಸಾಹಿತ್ಯ–ಹಿಂದಣ ಹೆಜ್ಜೆಯನರಿತಲ್ಲದೆ’, ‘ಕನ್ನಡ ಭಾಷಾ ಬಿಕ್ಕಟ್ಟುಗಳು’, ‘ಚಾಟಿ ಹಿಡಿಯದ ಚಾಳಿ: ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿಹೋಗಿದೆ..?’ ಸೇರಿ ವಿವಿಧ ಗೋಷ್ಠಿಗಳು ನಡೆಯಲಿವೆ. ಸಾಹಿತ್ಯ ಚರ್ಚೆಗಳ ಜತೆಗೆ ಸಮ್ಮೇಳನದ ಸಂದರ್ಭದಲ್ಲಿ 16 ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಸುಮಾರು 2 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.
16 ಪುಸ್ತಕ ಮಳಿಗೆಗಳು:
ರಂಗಕರ್ಮಿ ಶಶಿಧರ್ ಭಾರಿಘಾಟ್ ಮಾತನಾಡಿ, ‘ಶನಿವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಸಮಾರಂಭ ನಡೆಯಲಿದೆ. ಸಂಜೆಯವರೆಗೂ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೂಡಲಪಾಯ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ. ಪುಸ್ತಕ ಬಿಡುಗಡೆ, ಬಯಲು ಚಿತ್ರಕಲಾ ಶಿಬಿರವೂ ನಡೆಯಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನೂ ಹಮ್ಮಿಕೊಳ್ಳಲಾಗಿದೆ. 16 ಮಳಿಗೆಗಳು ಇರಲಿವೆ’ ಎಂದರು.
ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ ಎನ್.ವಿ., ‘ಸಮ್ಮೇಳನದ ಎರಡನೇ ದಿನವಾದ ಭಾನುವಾರ ‘ಬಾಲವನ’ ಶೀರ್ಷಿಕೆಯಡಿ ಮಕ್ಕಳಿಗೆ ಪ್ರತ್ಯೇಕ ಗೋಷ್ಠಿ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಲೇಖಕಿ ಎಚ್.ಆರ್. ಸುಜಾತಾ, ‘ಕರ್ನಾಟಕ ಹಾಗೂ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ನಡೆಯುತ್ತಿರುವ ಪ್ರಯೋಗಗಳು, ಪಲ್ಲಟಗಳನ್ನು ಗುರುತಿಸುವ ಪ್ರಯತ್ನ ನಡೆಯಲಿದೆ. ಇಂಗ್ಲಿಷ್ ಭಾಷೆಗೂ ಒಂದು ವೇದಿಕೆ ಇರಲಿದೆ’ ಎಂದು ಹೇಳಿದರು.
ಸಮ್ಮೇಳನದ ಸಂಯೋಜಕ ಆನಂದ ರಾಜೇ ಅರಸ್ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆ ವಿಮರ್ಶೆ ಮತ್ತು ಸಂವಾದಕ್ಕೆ ಹೊಸ ವೇದಿಕೆ ಕಲ್ಪಿಸುವ ಉದ್ದೇಶವನ್ನು ಈ ಸಮ್ಮೇಳನ ಹೊಂದಿದೆ. ಸರ್ಕಾರದಿಂದ ಅನುದಾನ ಪಡೆಯದೆ ಸಮ್ಮೇಳನ ನಡೆಸಲಾಗುತ್ತಿದೆಹಂಪ ನಾಗರಾಜಯ್ಯ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.