ADVERTISEMENT

ಡ್ರಗ್ಸ್ ಪ್ರಕರಣ| ತನಿಖೆಗೆ ಸೂಚನೆ: ನಾಳೆ ಸಿಸಿಬಿ ಕಚೇರಿಗೆ ಇಂದ್ರಜಿತ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 16:24 IST
Last Updated 30 ಆಗಸ್ಟ್ 2020, 16:24 IST
   

ಬೆಂಗಳೂರು: ಬೆಂಗಳೂರು ಕೇಂದ್ರವಾಗಿಸಿಕೊಂಡು ನಡೆಯುತ್ತಿರುವ ಡ್ರಗ್ಸ್ ದಂಧೆ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಪ್ರವೀಣ್ ಸೂದ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಕಲ್ಯಾಣನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟೊಂದರ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳು, ಪ್ರಮುಖ ಆರೋಪಿ ಡಿ. ಅನಿಕಾ ಸೇರಿ ಮೂವರನ್ನು ಬಂಧಿಸಿ, ಅವರಿಂದ ಸಾಕಷ್ಟು ಮಾಹಿತಿ ಹೊರಗೆಡವಿದ್ದಾರೆ. ಈ ಬಂಧನ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದೆ.

ಇದರ ನಡುವೆಯೇ, ಸಿಸಿಬಿ ಪೊಲೀಸರು ಡ್ರಗ್ಸ್ ಬಗ್ಗೆ ತನಿಖೆ ಆರಂಭಿಸಿದ್ದು, ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಅವರನ್ನು ಸೋಮವಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಡಿಜಿ–ಐಜಿಪಿ ಸಹ ತನಿಖೆಗೆ ಸೂಚಿಸಿರುವುದರಿಂದ, ಸಿಸಿಬಿಯ ವಿಶೇಷ ತಂಡಗಳು ಡ್ರಗ್ಸ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿವೆ.

ADVERTISEMENT

ಪ್ರಕರಣದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಸೂದ್, ‘ಸ್ಯಾಂಡಲ್‌ವುಡ್‌ನಲ್ಲಿ ಅವ್ಯಾಹತವಾಗಿದೆ ಎನ್ನಲಾದ ಡ್ರಗ್ಸ್ ದಂಧೆ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಮ್ಮ ಪೊಲೀಸರು ಸಹ ಡ್ರಗ್ಸ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಡ್ರಗ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಡ್ರಗ್ಸ್ ಮಾರಾಟ ಕೃತ್ಯದಲ್ಲಿ ವಿದೇಶಿ ಪ್ರಜೆಗಳು ಶಾಮೀಲಾಗುತ್ತಿದ್ದಾರೆ. ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕಾಗಿ ಬರುತ್ತಿರುವ ವಿದೇಶಿಯರು ಇಂಥ ಡ್ರಗ್ಸ್ ಮಾರಾಟದಲ್ಲಿ ತೊಡಗುತ್ತಿದ್ದಾರೆ. ಅಂಥವರ ವಿರುದ್ಧ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ತಿಳಿಸಿದರು.

ಅನುಮಾನಾಸ್ಪದ ವ್ಯಕ್ತಿಗಳ ಪಟ್ಟಿ; ‘ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ಇದೆ’ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸಿಸಿಬಿ ಪೊಲೀಸರು, ಕೆಲ ಅನುಮಾನಾಸ್ಪದ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಅವರು ಸಹ ಸಿಸಿಬಿ ವಿಚಾರಣೆಯಲ್ಲಿ ಕೆಲ ನಟ–ನಟಿಯರ ಹೆಸರುಗಳನ್ನು ತಿಳಿಸುವ ಸಾಧ್ಯತೆ ಇದೆ. ಅಂಥವರ ಹೆಸರನ್ನೂ ಪಟ್ಟಿಯಲ್ಲಿ ಉಲ್ಲೇಖಿಸಿ, ಅವರನ್ನೂ ವಿಚಾರಣೆಗೆ ಕರೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

‘ಇಂದ್ರಜಿತ್ ಅವರು ಕಚೇರಿಗೆ ಬಂದು ಮಾಹಿತಿ ನೀಡಲಿದ್ದಾರೆ. ಅವರು ಹೇಳಿಕೆ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.