ADVERTISEMENT

ಎಂಇಎಸ್ ನಿಷೇಧಕ್ಕೆ ಹೋರಾಟಗಾರರ ಪಟ್ಟು: ವಿವಿಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 20:25 IST
Last Updated 20 ಡಿಸೆಂಬರ್ 2021, 20:25 IST
ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಮುಂದಾದರು
ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಮುಂದಾದರು    

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಜಯ ಕರ್ನಾಟಕ,ಕರ್ನಾಟಕ ಪ್ರದೇಶ ಕುರುಬರ ಸಂಘ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಮೈಸೂರು ಬ್ಯಾಂಕ್‌ ವೃತ್ತ ಹಾಗೂ ಮೆಜೆಸ್ಟಿಕ್‌ ಬಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರನ್ನು ಕೂಡಲೇ ಬಂಧಿಸಬೇಕು. ಎಂ.ಇ.ಎಸ್‌ ಚಟುವಟಿಕೆಗಳಿಗೆ ರಾಜ್ಯದಲ್ಲಿ ನಿಷೇಧ ಹೇರಬೇಕು. ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭಾವಚಿತ್ರಕ್ಕೆ ಹಾಗೂ ಎಂಇಎಸ್‌ ಹಾಗೂ ಶಿವಸೇನಾ ಧ್ವಜಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಮಹಾರಾಷ್ಟ್ರ ಏಕೀಕರಣ ಸಂಘಟನೆಗೆ ಧಿಕ್ಕಾರ’, ‘ಎಂ.ಇ.ಎಸ್‌.ಪುಂಡರಿಗೆ ಧಿಕ್ಕಾರ’ ಎಂಬ ಬರಹಗಳನ್ನು ಹೊಂದಿದ್ದ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಮನಗಂಡ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ADVERTISEMENT

‘ಎಂ.ಇ.ಎಸ್‌. ಸಂಘಟನೆಯನ್ನು ನಿಷೇಧಿಸಲು ಸರ್ಕಾರ ಮುಂದಾಗಬೇಕು. ಇನ್ನು ಎರಡು ದಿನಗಳೊಳಗೆ ಈ ಕುರಿತ ನಿರ್ಣಯ ಪ್ರಕಟಿಸಬೇಕು. ಇಲ್ಲದಿದ್ದರೆ ಬುಧವಾರ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಸಭೆ ನಡೆಸಲಿದ್ದೇವೆ. ಆ ಸಭೆಯಲ್ಲಿ ಕರ್ನಾಟಕ ಬಂದ್‌ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ’ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದರು.

‘ಬೆಳಗಾವಿ ಅಧಿವೇಶನದಲ್ಲೇ ಎಂ.ಇ.ಎಸ್‌.ನಿಷೇಧಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಲಾಗುತ್ತದೆ’ ಎಂದು ಸಾ.ರಾ.ಗೋವಿಂದು ಎಚ್ಚರಿಸಿದರು.

‘ಮಹಾರಾಷ್ಟ್ರದವರು ಹಾಗೂ ಶಿವಸೇನಾದ ಗೂಂಡಾಗಳು ರಾಜ್ಯದೊಳಗೆ ಬಂದು ಎಂ.ಇ.ಎಸ್‌.ನ ಕಿಡಿಗೇಡಿಗಳ ಜೊತೆ ಸೇರಿಕೊಂಡು ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದಾರೆ. ಕನ್ನಡಿಗರ ಆಸ್ತಿಪಾಸ್ತಿಗೂ ಹಾನಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಅವರನ್ನು ಬಂಧಿಸುವ ಬದಲು ಕನ್ನಡಪರ ಹೋರಾಟಗಾರರ ಮೇಲೆ ದರ್ಪ ತೋರುತ್ತಿದೆ’ ಎಂದು ಕ.ರ.ವೇ (ಶಿವರಾಮೇಗೌಡ ಬಣ) ರಾಜ್ಯ ಘಟಕದ ಅಧ್ಯಕ್ಷ ಶಿವರಾಮೇಗೌಡ ಕಿಡಿಕಾರಿದರು.

‘ಕನ್ನಡಿಗರು ಶಾಂತಿ ಪ್ರಿಯರು. ಇದನ್ನೇ ದೌರ್ಬಲ್ಯವೆಂದು ಭಾವಿಸಬೇಡಿ. ಎಂ.ಇ.ಎಸ್‌. ಕೃತ್ಯಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕೆಂಬುದು ನಮಗೆ ತಿಳಿದಿದೆ. ಬೆಳಗಾವಿಯಲ್ಲಿ ಹಿಟ್ಲರ್‌ ಸಂಸ್ಕೃತಿ ನಿರ್ಮಾಣವಾಗಿದೆ. ಕನ್ನಡಪರ ಹೋರಾಟಗಾರರು ಬೆಳಗಾವಿ ಪ್ರವೇಶಿಸದಂತೆ ತಡೆಯುತ್ತಿರುವುದು ಸರಿಯಲ್ಲ. ಎಂ.ಇ.ಎಸ್‌.ಪುಂಡರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಾಯಿ ಮಾತಿಗಷ್ಟೇ ಹೇಳಲಾಗುತ್ತಿದೆ. ಈವರೆಗೂ ಕ್ರಮ ಜ‌ರುಗಿಸಿಲ್ಲ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಾಡಿನ ಐಕ್ಯತೆಗೆ ಧಕ್ಕೆ ತರುವವರಿಗೆ ತಕ್ಕ ಶಾಸ್ತಿಯಾಗಲೇಬೇಕು. ಕನ್ನಡಿಗರ ಭಾವನೆಯನ್ನು ಗೌರವಿಸಬೇಕು. ರಾಜಕಾರಣಿಗಳು ನಾಡಿನ ಸ್ವಾಭಿಮಾನ ಮಾರಲು ಹೊರಟಿದ್ದಾರೆ. ಕನ್ನಡಿಗರ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಬಾರದು’ ಎಂದರು.

ಸಂಚಾರ ಅಸ್ತವ್ಯಸ್ತ
ನಗರದ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲವೆಡೆ ವಾಹನ ದಟ್ಟಣೆ ಉಂಟಾಗಿತ್ತು. ಬೇರೆ ಬೇರೆ ಊರುಗಳಿಗೆ ಹೋಗುವವರು ಮೆಜೆಸ್ಟಿಕ್‌ ತಲುಪಲು ಹರಸಾಹಸ ಪಡಬೇಕಾಯಿತು. ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ಹೊರಟಿದ್ದವರೂ ದಟ್ಟಣೆಯಲ್ಲಿ ಸಿಲುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.