ನಗರದಲ್ಲಿ ಶನಿವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನರೇಂದ್ರ ಕುಮಾರ್, ಬಾಬು ಕೃಷ್ಣಮೂರ್ತಿ, ವಿಕ್ರಮ್ ಸಂಪತ್ ಹಾಗೂ ಜಿ.ಬಿ. ಹರೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಹಿಂದುತ್ವದ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್, ತಮ್ಮನ್ನು ಬ್ರಿಟಿಷರಿಗೆ ಮಾರಾಟ ಮಾಡಿಕೊಂಡಿದ್ದರೆ ಕಾನೂನು ಸಚಿವರಾಗುವ ಅವಕಾಶ ಲಭಿಸುತ್ತಿತ್ತು’ ಎಂದು ಲೇಖಕ ವಿಕ್ರಮ್ ಸಂಪತ್ ಹೇಳಿದರು.
ನಗರದಲ್ಲಿ ಸಾಹಿತ್ಯ ಪ್ರಕಾಶನ ಶನಿವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬ್ರಿಟಿಷರಿಂದ ಸಾವರ್ಕರ್ ಪಿಂಚಣಿ ಪಡೆಯುತ್ತಿದ್ದರು, ತಮ್ಮನ್ನು ಮಾರಾಟ ಮಾಡಿಕೊಂಡಿದ್ದರು ಎಂದೆಲ್ಲಾ ಹೇಳುತ್ತಾರೆ. ಆದರೆ, ಬ್ರಿಟಿಷರು ಅವರ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅವರಿಗೆ ಅಡುಗೆ ಮಾಡಲು ಪಾತ್ರೆ ಇರಲಿಲ್ಲ. ಭಿಕ್ಷೆ ಬೇಡಿ ಜೀವನ ನಡೆಸುವ ಪರಿಸ್ಥಿತಿ ಇತ್ತು. ಅವರ ಪದವಿಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು’ ಎಂದು ಹೇಳಿದರು.
‘ಕಾಲಾಪಾನಿ ಶಿಕ್ಷೆ ನಂತರ ಸಾವರ್ಕರ್ ರತ್ನಗಿರಿಗೆ ಬಂದರು. ಐದು ವರ್ಷ ರಾಜಕೀಯ ಪ್ರವೇಶಿಸುವಂತಿಲ್ಲ. ರತ್ನಗಿರಿ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬ ನಿರ್ಬಂಧವನ್ನು ಅವರಿಗೆ ವಿಧಿಸಲಾಗಿತ್ತು. 13 ವರ್ಷ ಗೃಹಬಂಧನದಲ್ಲಿ ಇರಿಸಲಾಗಿತ್ತು’ ಎಂದು ಹೇಳಿದರು.
‘ಕ್ರಾಂತಿಕಾರಿಗಳ ಜತೆ ಅವರು ಸಂಪರ್ಕದಲ್ಲಿರುವ ಬಗ್ಗೆ ಬ್ರಿಟಿಷ್ ಗುಪ್ತಚರ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹಾಗಾಗಿ ಅವರ ಮೇಲೆ ಬ್ರಿಟಿಷರಿಗೆ ವಿಶ್ವಾಸ ಇರಲಿಲ್ಲ. 1937ರಲ್ಲಿ ಬಿಡುಗಡೆಯಾದ ಬಳಿಕ ಕಾಂಗ್ರೆಸ್ ಸೇರುವಂತೆ ಸಾವರ್ಕರ್‌ಗೆ ಆಹ್ವಾನ ಬಂದಿತ್ತು. ಆದರೆ, ಅದನ್ನು ನಿರಾಕರಿಸಿದರು’ ಎಂದರು.
‘ಸಾವರ್ಕರ್ ಅವರಿಗೆ ಭಾರತರತ್ನ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ಪರ–ವಿರೋಧ ಚರ್ಚೆ ನಡೆಯುತ್ತಿದೆ. ಭಗತ್ ಸಿಂಗ್ ಅವರ ಜೈಲು ಡೈರಿಯಲ್ಲಿ ಸಾವರ್ಕರ್ ಅವರ ಪುಸ್ತಕದ ಕುರಿತು ಬರೆದಿದ್ದಾರೆ. ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಅವರ ವ್ಯಕಿತ್ತದ ಪ್ರಮಾಣಪತ್ರ ನೀಡುವ ಕೆಲಸ ಮಾಡಬಾರದು. ಅವರಿಗೆ ಆಗಿದ್ದ ಅನ್ಯಾಯದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಲೇಖಕ ಬಾಬು ಕೃಷ್ಣಮೂರ್ತಿ ಅವರು ವಿಕ್ರಮ್ ಸಂಪತ್ ಅವರ ‘ಸಾವರ್ಕರ್ ವಿವಾದಾಸ್ಪದ ವಾರಸಿಕೆ: 1924–1966 ಭಾಗ–2’ (ಕನ್ನಡ ಅನುವಾದ: ನರೇಂದ್ರಕುಮಾರ್, ಮಂಜುಳಾ ಟೇಕಲ್) ಹಾಗೂ ವಾಗ್ಮಿ ಜಿ. ಬಿ.ಹರೀಶ ಅವರು ‘ಶಿವನಿಗಾಗಿ ಕಾಯುತ್ತ’ ಕೃತಿಯ ಮೂರನೇ ಮುದ್ರಣವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಲೇಖಕ ಜಿ.ಎಲ್.ಶೇಖರ್, ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.