ಬೆಂಗಳೂರು: ನಂದಿಬೆಟ್ಟದಲ್ಲಿರುವ ಅರ್ಕಾವತಿ ನದಿಯ ಉಗಮ ಸ್ಥಾನದ ಬಫರ್ ವಲಯದಲ್ಲಿ ರೋಪ್‌ವೇ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ತಿಳಿಸಿದೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುರ್ ಆಶ್ರಮದ ಸಂತೋಷ ಭಾರತೀ ಸ್ವಾಮೀಜಿ, ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ, ಪ್ರತಿಷ್ಠಾನದ ಗೌರವ ಅಧ್ಯಕ್ಷ ಮಂಜುನಾಥ ಹೆಗ್ಗಡೆ, ಅಧ್ಯಕ್ಷ ಸಿ.ಡಿ. ಕಿರಣ್, ‘ಪ್ರವಾಸೋದ್ಯಮದ ಹೆಸರಿನಲ್ಲಿ ನಂದಿಬೆಟ್ಟದಲ್ಲಿರುವ ಪ್ರಕೃತಿ ಸಂಪತ್ತನ್ನು ನಾಶ ಮಾಡಲಾಗುತ್ತಿದೆ. ಇದರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಂದಿ ಬೆಟ್ಟಕ್ಕೆ ಹಾನಿಯಾದರೆ ಜಲ ಮೂಲಗಳು ಶಾಶ್ವತವಾಗಿ ನಶಿಸಿಹೋಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನಂದಿಬೆಟ್ಟದ ಪರಿಸರ ಕುಲುಷಿತವಾಗಿದ್ದು, ಕಳೆದ ಕೆಲ ವರ್ಷಗಳಲ್ಲಿ 500 ಟ್ರ್ಯಾಕ್ಟರ್ ಪ್ಲಾಸ್ಟಿಕ್, ಮದ್ಯದ ಬಾಟಲಿಗಳನ್ನು ಸಂಗ್ರಹಿಸಲಾಗಿದೆ. ನಂದಿ ಬೆಟ್ಟ ತ್ಯಾಜ್ಯ ಸುರಿಯುವ ತಿಪ್ಪೆಯನ್ನಾಗಿ ಮಾಡಬಾರದು. ಪಂಚನದಿಗಳ ಉಗಮಸ್ಥಾನವಾದ ನಂದಿ ಬೆಟ್ಟದ ಜಲ ಮೂಲಗಳು ಬತ್ತಿಹೋಗುತ್ತಿವೆ’ ಎಂದರು.
‘ನಂದಿಬೆಟ್ಟ ಉಳಿಸಲು ಸಾಹಿತಿಗಳು, ಚಿಂತಕರು, ಕಲಾವಿದರು, ಹೋರಾಟಗಾರರ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪರೇಷಗಳನ್ನು ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.
‘ರೋಪ್ ವೇ ನಿರ್ಮಿಸಲು ಸುಮಾರು 150 ಅಡಿ ಪ್ರದೇಶದಲ್ಲಿ ಬಂಡೆ ಕೊರೆಯುವುದರಿಂದ ನಂದಿ ಬೆಟ್ಟ ಬಿರುಕು ಬಿಡುವ ಸಾಧ್ಯತೆಯಿದೆ. ಜನ ಪ್ರತಿನಿಧಿಗಳಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲ. ಸರ್ಕಾರ, ಜನಪ್ರತಿನಿಧಿಗಳಿಂದ ನಂದಿ ಬೆಟ್ಟ ಉಳಿಸಲು ಸಾಧ್ಯವಿಲ್ಲ. ಬದಲಿಗೆ ಜನ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ’ ಎಂದರು.
ಚಲನಚಿತ್ರ ನಿರ್ಮಾಪಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಮಾತನಾಡಿ, ‘ನಂದಿ ಬೆಟ್ಟದಲ್ಲಿ ವಾಹನಗಳ ಪ್ರವೇಶ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ಎಪಿಎಂಸಿ ಯಾರ್ಡ್‌ನ ಹೂವಿನ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ಶ್ರೀಧರ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.