
ಬೆಂಗಳೂರು: ಸಮಾಜದವರು ಅನುಭವಿಸುತ್ತಿರುವ ಸಂಕಷ್ಟವನ್ನು ತಪ್ಪಿಸಲು ಪರಿಶಿಷ್ಟ ಜಾತಿಯವರಿಗೆ ಇರುವಂತೆಯೇ ತಮ್ಮ ಸಮುದಾಯಕ್ಕೂ ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸುಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸವಿತಾ ಸಮಾಜವು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
ಗ್ರಾಮೀಣ ಭಾಗದಲ್ಲಿ ವೃತ್ತಿ ನಿರತ ಸವಿತಾ ಸಮಾಜದವರು ಬೇರೆ ಬೇರೆ ವರ್ಗಗಳಿಂದ ತೊಂದರೆ ಅನುಭವಿಸುವಂತಾಗಿದೆ. ದೌರ್ಜನ್ಯಗಳು ನಡೆಯುತ್ತಲೇ ಇವೆ. ಅಸ್ಪೃಶ್ಯತೆಯನ್ನು ತಮ್ಮ ಸಮುದಾಯವೂ ಅನುಭವಿಸುತ್ತಿದೆ. ಹಿಂದುಳಿದ ವರ್ಗಗಳ ಆಯೋಗವು ಸರ್ಕಾರ ಸಲ್ಲಿಸಿದ ವರದಿಯಲ್ಲಿ ತಮ್ಮ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ಉಲ್ಲೇಖಿಸಲಾಗಿದೆ. ಈ ವರದಿಯ ಶಿಫಾರಸಿನಲ್ಲಿ ಸವಿತಾ ಸಮಾಜವನ್ನೂ ಜಾತಿ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದು ಸಮಾಜದ ಅಧ್ಯಕ್ಷ ಡಿ.ಆರ್.ಕೃಷ್ಣ ಅವರು ಸರ್ಕಾರವನ್ನು ಒತ್ತಾಯಿಸಿದರು.
ಸವಿತಾ ಸಮುದಾಯದ 26 ಜಾತಿಗಳಿಗೆ ಸೇರಿದವರು, ಕರ್ನಾಟಕದಲ್ಲಿ ಸವರ್ಣೀಯರ ಹಾಗೂ ಪರಿಶಿಷ್ಟ ಜಾತಿ, ಪಂಗಡದವರ ಮಧ್ಯದ ಅಡಕತ್ತರಿಯಲ್ಲಿ ಸಿಕ್ಕಿ ನಲುಗುತ್ತಿದ್ದೇವೆ. ಮೀಸಲಾತಿಯ ಪಟ್ಟಿಯೊಳಗೆ ಪ್ರವರ್ಗ 2 ಎ ನಲ್ಲಿ 102 ಜಾತಿಗಳ ಮಧ್ಯೆ ತಮ್ಮ ಸಮುದಾಯವನ್ನು ಸೇರಿಸಲಾಗಿದೆ. ಇದರಿಂದಾಗಿ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡವನ್ನು ಹೋಲುವಂತಹ ಸಮುದಾಯವಾಗಿದೆ. ಹೀಗಾಗಿ, ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಸಿ.ಟಿ.ರವಿ ಅವರು ತಮ್ಮ ಸಮಾಜದ ವಿರುದ್ದ ಅವಹೇಳನಕಾರಿಯಾಗಿ ನಡೆದುಕೊಂಡಿದ್ದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಅವರನ್ನುಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.