ADVERTISEMENT

ಶಿಕ್ಷಕರ ದಿನಾಚರಣೆ ಫುಲೆ ದಂಪತಿ ಹೆಸರಿನಲ್ಲಿ ನಡೆಯಬೇಕು– ಬಿ.ಗೋಪಾಲ್ ಪ್ರತಿಪಾದನೆ

ಸಾವಿತ್ರಿಬಾ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿ.ಗೋಪಾಲ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 19:24 IST
Last Updated 17 ಮಾರ್ಚ್ 2021, 19:24 IST
ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಸಾಧಕ ಮಹಿಳೆಯರಿಗೆ ಬುಧವಾರ ಪ್ರದಾನ ಮಾಡಲಾಯಿತು. ಐಪಿಎಸ್ ಅಧಿಕಾರಿ ಡಿ. ರೂಪಾ, ಶಾಸಕಿ ಸೌಮ್ಯಾರೆಡ್ಡಿ, ಸಾಹಿತಿ ಕೆ.ಷರೀಫಾ, ಭೀಮಪುತ್ರಿ ಬ್ರಿಗೇಡ್ ಅಧ್ಯಕ್ಷೆ ರೇವತಿರಾಜ್, ರಾಜ್ಯ ಸಂಚಾಲಕ ಎ.ಆರ್.ಗೋವಿಂದಸ್ವಾಮಿ, ಸಾಮಾಜಿಕ ಕಾರ್ಯಕರ್ತ ಗೊಲ್ಲಹಳ್ಳಿ ಶಿವಪ್ರಸಾದ್, ಚಿಂತಕ ಯೋಗೇಶ್ ಮಾಸ್ಟರ್ ಇದ್ದರು  -ಪ್ರಜಾವಾಣಿ ಚಿತ್ರ
ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಸಾಧಕ ಮಹಿಳೆಯರಿಗೆ ಬುಧವಾರ ಪ್ರದಾನ ಮಾಡಲಾಯಿತು. ಐಪಿಎಸ್ ಅಧಿಕಾರಿ ಡಿ. ರೂಪಾ, ಶಾಸಕಿ ಸೌಮ್ಯಾರೆಡ್ಡಿ, ಸಾಹಿತಿ ಕೆ.ಷರೀಫಾ, ಭೀಮಪುತ್ರಿ ಬ್ರಿಗೇಡ್ ಅಧ್ಯಕ್ಷೆ ರೇವತಿರಾಜ್, ರಾಜ್ಯ ಸಂಚಾಲಕ ಎ.ಆರ್.ಗೋವಿಂದಸ್ವಾಮಿ, ಸಾಮಾಜಿಕ ಕಾರ್ಯಕರ್ತ ಗೊಲ್ಲಹಳ್ಳಿ ಶಿವಪ್ರಸಾದ್, ಚಿಂತಕ ಯೋಗೇಶ್ ಮಾಸ್ಟರ್ ಇದ್ದರು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಲು ಕಾರಣರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಬೇಕು’ ಎಂದು ಪ್ರಜಾ ಪರಿವರ್ತನ ಪಕ್ಷದ ಸಂಸ್ಥಾಪಕ ಬಿ.ಗೋಪಾಲ್ ಪ್ರತಿಪಾದಿಸಿದರು.

ಭೀಮಪುತ್ರಿ ಬ್ರಿಗೆಡ್ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ಎಲ್ಲ ಬಡವರಿಗೆ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಶಾಲೆಗಳನ್ನು ತೆರೆಯಬೇಕು ಎಂದು ಹಂಟರ್ ಆಯೋಗದ ಮುಂದೆ ವಾದ ಮಾಡಿದವರು ಜ್ಯೋತಿಬಾ ಫುಲೆ. ಹಳ್ಳಿಗಳಲ್ಲಿ ಶಾಲೆಗಳು ಪ್ರಾರಂಭವಾಗಲು ಈ ದಂಪತಿಯೇ ಕಾರಣಕರ್ತರು’ ಎಂದು ಹೇಳಿದರು.

‘ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಈ ದಂಪತಿಗಳ ಬಗ್ಗೆ ಪಾಠ–ಪ್ರವಚನಗಳು ನಡೆಯುತ್ತಿಲ್ಲ. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿ ತನಕ ಇವರ ಕುರಿತು ಅಧ್ಯಯನಗಳು ನಡೆಯಬೇಕಿದೆ’ ಎಂದರು.

ADVERTISEMENT

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ‘ಈ ದೇಶದ ಲಿಂಗಾನುಪಾತ ಗಮನಿಸಿದರೆ ಹೆಣ್ಣು ಮಕ್ಕಳಿಗೆ ಗರ್ಭದಲ್ಲೇ ಶೋಷಣೆ ಆಗುತ್ತಿದೆ ಎಂಬುದು ತಿಳಿಯುತ್ತದೆ. ಆಸ್ತಿಯಲ್ಲಿ ಪಾಲು ಸಿಗಬೇಕೆಂಬ ನಿಯಮ ಇದೆಯಾದರೂ, ಬಹುತೇಕ ಅಸ್ತಿ ಪುರುಷರ ಹೆಸರಿನಲ್ಲೇ ಇದೆ’ ಎಂದರು.

ಶಾಸಕಿ ಸೌಮ್ಯಾರೆಡ್ಡಿ, ಐಪಿಎಸ್ ಅಧಿಕಾರಿ ಡಿ.ರೂಪಾ, ತೃತೀಯ ಲಿಂಗಿಗಳ ಪರ ಹೋರಾಟಗಾರ್ತಿ ಚಾಂದಿನಿ, ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ಗೀತಾ ಶಿವಮೂರ್ತಿ, ಸಾಹಿತಿ ಕೆ.ಷರೀಫಾ, ಹೋರಾಟಗಾರ್ತಿ ವಿನುತಾ ಮೂಲ, ಜಾನಪದ ಗಾಯಕಿ ವಡ್ಡಗೆರೆ ಕದಿರಮ್ಮ, ಪತ್ರಕರ್ತೆ ಶಶಿಕಲಾ, ರಂಗಕರ್ಮಿ ರಾಜೇಶ್ವರಿ, ಮನೋರಂಜನಿ, ಅನಾಥ ಶಾವಗಳನ್ನು ಸಂಸ್ಕಾರ ಮಾಡುವ ಸಾಮಾಜಿಕ ಕಾರ್ಯಕರ್ತೆ ಆಶಾ, ಶಿಕ್ಷಕಿ ಹರ್ಷಿಯಾ ಬಾನು, ಕ್ರೀಡಾಪಟುಗಳಾದ ದೀಪಿಕಾ, ಎನ್‌. ಸುನೈನಾ, ಬಿಎಂಟಿಸಿ ಚಾಲಕಿ ಪ್ರೇಮಾ ರಾಮಪ್ಪ ನಡಬಟ್ಟಿ, ಬುಡಕಟ್ಟು ಸಮುದಾಯಗಳ ಪರ ಹೋರಾಟಗಾರ್ತಿ ಎನ್‌. ವರಲಕ್ಷ್ಮಿ, ನಿರೂಪಕಿ ರೇಣುಕಾ, ಮಂಜುಳಾ ಕೊಂಡರಾಜನಹಳ್ಳಿ, ಉಪನ್ಯಾಸಕಿ ಪ್ರೇಮಪಲ್ಲವಿ, ಬೆಸ್ಕಾಂ ಲೈನ್‌ ವುಮನ್ ಟಿ. ಕಾವ್ಯಾ ಅವರಿಗೆ ಸಾವಿತ್ರಿಬಾ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೌರ್ಯ ವೃತ್ತದಿಂದ ಹೊರಟ ಸಾವಿತ್ರಿಬಾ ಫುಲೆ ರಥಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು. ಭೀಮಪುತ್ರಿ ಬ್ರಿಗೇಡ್ ಕಚೇರಿಯನ್ನು ಶಾಸಕ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.