ADVERTISEMENT

ಕಾರಂತ ಬಡಾವಣೆ: 355 ಕಟ್ಟಡಗಳ ಸಕ್ರಮ; ಬಿಡಿಎಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 20:45 IST
Last Updated 1 ಆಗಸ್ಟ್ 2022, 20:45 IST
   

ನವದೆಹಲಿ: ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಶ್ರೀರಾಮಚಂದ್ರ ಮಿಷನ್‌ ಆಶ್ರಮದ ವಲಯ ಕೇಂದ್ರದ ಐದು ಎಕರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಭೂಸ್ವಾಧೀನ ಮಾಡಬಾರದುಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಜತೆಗೆ,ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿಯ 18ನೇ ವರದಿಯಲ್ಲಿ ಉಲ್ಲೇಖಿಸಲಾಗಿರುವ 355 ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಈ ಕೇಂದ್ರದಲ್ಲಿ ಧ್ಯಾನ, ವಿಜ್ಞಾನ ಶಿಬಿರಗಳು, ಆರೋಗ್ಯ ಶಿಬಿರಗಳು ಹಾಗೂ ವಿಚಾರ ಸಂಕಿರಣಗಳು, ಮಕ್ಕಳ ಕಾರ್ಯಕ್ರಮ, ಯೋಗ ಶಿಬಿರಗಳು, ವೈದ್ಯಕೀಯ ಶಿಬಿರಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜತೆಗೆ, 2.5 ಲಕ್ಷಗಿಡಗಳನ್ನು ವಿತರಿಸಲಾಗಿದೆ ಎಂದು ಕೇಂದ್ರದ ಪ್ರಮುಖರು ಚಂದ್ರಶೇಖರ್‌ ಸಮಿತಿಗೆ ಮಾಹಿತಿ ನೀಡಿದ್ದರು. ಈ ಕೇಂದ್ರದ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬಹುದು ಎಂದು ಸಮಿತಿ ಹೇಳಿತ್ತು. ಅದರ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.

ADVERTISEMENT

ಶಿವರಾಮ ಕಾರಂತ ಬಡಾವಣೆಯನ್ನು 650 ಎಕರೆ ಜಾಗದಲ್ಲಿ ನಿರ್ಮಿಸಲು 2008ರಲ್ಲಿ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಉದ್ದೇಶಿತ ಬಡಾವಣೆ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಒಂದಿಂಚೂ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬಾರದು ಎಂದು ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ 2018ರ ಆಗಸ್ಟ್‌ 3ರಂದು ನಿರ್ದೇಶನ ನೀಡಿತ್ತು. ಬಡಾವಣೆ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಹಲವಾರು ಮಂದಿ ಮನೆಗಳನ್ನು ಕಟ್ಟಿಕೊಂಡಿದ್ದರು. 2018ರಲ್ಲಿ ನೀಡಿದ ಆದೇಶದ ಪಾಲನಾ ವರದಿಯನ್ನು ಕೋರ್ಟ್‌
ಪರಿಶೀಲಿಸುತ್ತಿದೆ.

ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯ ಪರವಾಗಿ ವಕೀಲ ಸಂಜಯ್‌ ಎಂ. ನುಲಿ ಅವರು 18ನೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವರದಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀರ, ‘ಭೂಮಿಯನ್ನು ಈಗ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆಯೋ ಆ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು’ ಎಂದು ಸ್ಪಷ್ಟಪಡಿಸಿದೆ.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಳಿಕವಷ್ಟೇ ಕಟ್ಟಡಗಳ ನವೀಕರಣ ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಮಾಡಬಹುದು’ ಎಂದೂ ಪೀಠವು ಸೂಚಿಸಿದೆ.

ಷರತ್ತಿಗೆ ಒಳಪಟ್ಟು 355 ಕಟ್ಟಡಗಳ ಜಾಗವನ್ನು ಸ್ವಾಧೀನಪಡಿಸಿಕೊಳ್ಳದಂತೆ ಪ್ರಾಧಿಕಾರಕ್ಕೆ ಕೋರ್ಟ್‌ ಸೂಚಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಶುಲ್ಕ ವಿಧಿಸಬಹುದು ಎಂದೂ ಪೀಠ ಹೇಳಿದೆ.

ವರದಿಯ ಪ್ರತಿಯನ್ನು ದಾಖಲೆಯ ಉದ್ದೇಶಕ್ಕಾಗಿ ಬಿಡಿಎ ಆಯುಕ್ತರಿಗೆ ಹಸ್ತಾಂತರಿಸುವಂತೆ ಸಮಿತಿಗೆ ನ್ಯಾಯಾಲಯ ಸೂಚಿಸಿದೆ.

ಸಂಬಂಧಪಟ್ಟ ಅರ್ಜಿದಾರರಿಗೆ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯ ಮೇಲ್ವಿಚಾರಣೆಯಲ್ಲಿ ಬಿಡಿಎ ಆಯುಕ್ತರು ಪಾರದರ್ಶಕ ರೀತಿಯಲ್ಲಿನಾಲ್ಕು ವಾರದೊಳಗೆ ಸಕ್ರಮ ಪ್ರಮಾಣಪತ್ರಗಳನ್ನು ನೀಡಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.

ಬಡಾವಣೆಯೊಳಗೆ ಸಂಪರ್ಕಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಬಡಾವಣೆಯೊಳಗಿನ
ಅಧಿಸೂಚಿತವಲ್ಲದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.