ADVERTISEMENT

ಪರಿಶಿಷ್ಟರು ಸಿ.ಎಂ ಸ್ಥಾನವನ್ನೇ ಕೇಳಬೇಕು: ಮಾರಸಂದ್ರ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 16:04 IST
Last Updated 7 ಜನವರಿ 2024, 16:04 IST
ಮಾರಸಂದ್ರ ಮುನಿಯಪ್ಪ 
ಮಾರಸಂದ್ರ ಮುನಿಯಪ್ಪ    

ಬೆಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎರಡು ಕೋಟಿ ಜನಸಂಖ್ಯೆ ಇದೆ. ಬಹುಸಂಖ್ಯಾತರಾಗಿರುವ ಪರಿಶಿಷ್ಟರು ಉಪ ಮುಖ್ಯಮಂತ್ರಿ ಸ್ಥಾನವನ್ನಲ್ಲ, ಮುಖ್ಯಮಂತ್ರಿ ಸ್ಥಾನವನ್ನೇ ಕೇಳಬೇಕು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು,‘ಕಾಂಗ್ರೆಸ್‌ ಪಕ್ಷವು ಬಸವಲಿಂಗಪ್ಪ, ಕೆ.ಎಚ್‌. ರಂಗನಾಥ್‌, ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಆಸೆ ತೋರಿಸಿ ಮೋಸ ಮಾಡಿದೆ. ಈಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಚಿವರು, ಶಾಸಕರು ಉಪ ಮುಖ್ಯಮಂತ್ರಿ ಸ್ಥಾನ ಕೇಳಬಾರದು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯಬೇಕು’ ಎಂದು ಹೇಳಿದ್ದಾರೆ.

‘ಬಹುಸಂಖ್ಯಾತರಾಗಿರುವ ಪರಿಶಿಷ್ಟರು ಉಪ ಮುಖ್ಯಮಂತ್ರಿ ಸ್ಥಾನ ಕೇಳುವುದು ನಾಚಿಕೆಗೇಡಿನ ವಿಷಯ. ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವ ವಿಶೇಷ ಅಧಿಕಾರವೂ ಇಲ್ಲ. ಬೆಂಗಾವಲು ವಾಹನವೊಂದೇ ವಿಶೇಷ’ ಎಂದಿದ್ದಾರೆ.

ADVERTISEMENT

‘ಕರ್ನಾಟಕದಲ್ಲಿ ಶೇಕಡ 11ರಷ್ಟು ಜನಸಂಖ್ಯೆ ಇರುವ ಲಿಂಗಾಯತರು 14 ಬಾರಿ, ಶೇ 10ರಷ್ಟು ಜನಸಂಖ್ಯೆ ಇರುವ ಒಕ್ಕಲಿಗರು ಎಂಟು ಬಾರಿ, ಶೇ 1ರಷ್ಟು ಜನಸಂಖ್ಯೆ ಇರುವ ಬ್ರಾಹ್ಮಣರು ಮೂರು ಬಾರಿ, ಶೇ 40ರಷ್ಟು ಜನಸಂಖ್ಯೆ ಇರುವ ಹಿಂದುಳಿದ ವರ್ಗಗಳವರು ಆರು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಶೇ 30ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟರು ಈವರೆಗೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ’ ಎಂದು ಹೇಳಿದ್ದಾರೆ.

‘ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುವ ಮೂರು ತಿಂಗಳ ಮೊದಲು ಪರಿಶಿಷ್ಟರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಉಳಿದಂತೆ ಪರಿಶಿಷ್ಟರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್‌ ಮತ್ತು ಬಿಜೆಪಿ ಯಾವತ್ತೂ ಪ್ರಯತ್ನಿಸಿಲ್ಲ. ಕಾನ್ಶಿರಾಮ್‌ ಅವರು ಸ್ಥಾಪಿಸಿದ ಬಿಎಸ್‌ಪಿಯಿಂದ ಮಾಯಾವತಿಯವರು ಮಾತ್ರ 1995, 1997, 2002 ಮತ್ತು 2007ರಲ್ಲಿ ಮುಖ್ಯಮಂತ್ರಿಯಾಗಿದ್ದರು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.