ADVERTISEMENT

ಶ್ರೀಗಂಧಕ್ಕೆ ವೈಜ್ಞಾನಿಕ ಮೌಲ್ಯ ನಿಗದಿಪಡಿಸಿ: ಬೆಳೆಗಾರರ ಸಂಘ ಆಗ್ರಹ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 14:45 IST
Last Updated 13 ಫೆಬ್ರುವರಿ 2026, 14:45 IST
<div class="paragraphs"><p>ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮ ಸಮೀಪ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಗಿಡಗಳು <br></p></div>

ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮ ಸಮೀಪ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಗಿಡಗಳು

   

ಪ್ರಜಾವಾಣಿ ಚಿತ್ರ /  ಬಿ.ಎಂ.ಕೇದಾರನಾಥ

ADVERTISEMENT

ಬೆಂಗಳೂರು: ‘ಅರಣ್ಯ ಇಲಾಖೆಯು ಶ್ರೀಗಂಧ ಮರಗಳಿಗೆ ವೈಜ್ಞಾನಿಕ ಮೌಲ್ಯ ನಿಗದಿಪಡಿಸದ ಕಾರಣ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮೌಲ್ಯ ನಿರ್ಧಾರದಲ್ಲಿ ರೈತರಿಗೆ ಆಗಿರುವ ತಾರತಮ್ಯ ಮತ್ತು ಶೋಷಣೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು’ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಆಗ್ರಹಿಸಿದೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ. ಅಮರನಾರಾಯಣ, ‘ರಾಜ್ಯದಲ್ಲಿ ಶ್ರೀಗಂಧ ಬೆಳೆಗೆ ಅವಕಾಶ ನೀಡಿರುವುದರಿಂದ, ಸುಮಾರು ಒಂದು ಕೋಟಿ ಮರಗಳನ್ನು ರೈತರು ಬೆಳೆದಿದ್ದಾರೆ. ಆದರೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವಾಗ, ಶ್ರೀಗಂಧ ಮರಗಳಿಗೆ ಸೂಕ್ತ ಮೌಲ್ಯವನ್ನು ರೈತರಿಗೆ ಒದಗಿಸುತ್ತಿಲ್ಲ. ಅರಣ್ಯ ಇಲಾಖೆ ಮರದ ಮೌಲ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾನದಂಡ ನಿಗದಿಪಡಿಸದಿರುವುದೇ ಇದಕ್ಕೆ ಕಾರಣ. ಇದು ರೈತರ ಶೋಷಣೆಗೂ ಅವಕಾಶ ಮಾಡಿಕೊಡುತ್ತಿದ್ದು, ಅರಣ್ಯ ಇಲಾಖೆಯವರು ಮನಸೋಯಿಚ್ಛೆ ದರ ಗೊತ್ತುಪಡಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ತೋಟಗಾರಿಕೆ ಇಲಾಖೆಯಲ್ಲಿ 75 ಜಾತಿಯ ಮರಗಳಿಗೆ ವೈಜ್ಞಾನಿಕವಾಗಿ ಮೌಲ್ಯ ನಿಗದಿಪಡಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆದರೆ ನಿಗದಿತ ಮರಗಳಿಗೆ ಮೌಲ್ಯವನ್ನು ಒದಗಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯ ಮಾನದಂಡದ ಅನುಸಾರ ಶ್ರೀಗಂಧ ಮರಗಳಿಗೂ ಮೌಲ್ಯ ನಿಗದಿಪಡಿಸಬೇಕು. ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಶ್ರೀಗಂಧ ಮರಗಳ ಮೌಲ್ಯ ನಿಗದಿಯಲ್ಲಿ ಹಗರಣಗಳು ನಡೆದಿವೆ. ಭೂಸ್ವಾಧೀನ ಪ್ರಕ್ರಿಯೆ ಸಂಬಂಧ 2017ರಲ್ಲಿ ಬಿ.ಎನ್.ಶ್ರೀನಿವಾಸ್‌ ಅವರಿಗೆ ಸೇರಿದ ಮರವೊಂದಕ್ಕೆ ₹81,950 ನಿಗದಿಪಡಿಸಿದರೆ, ಅದೇ ವರ್ಷ ಸುಶೀಲ ಎಂಬುವವರಿಗೆ ಸೇರಿದ ಮರಕ್ಕೆ ₹283 ಗೊತ್ತುಪಡಿಸಲಾಗಿದೆ. ಹೀಗೆ ಮೌಲ್ಯದಲ್ಲಿ ವ್ಯತ್ಯಾಸ ಕಾಣಬಹುದು. ಈ ಲೋಪವನ್ನು ಸರಿಪಡಿಸಿ, ಶ್ರೀಗಂಧ ಬೆಳೆಯ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಗೆ ವಹಿಸಬೇಕಿದೆ. ವೈಜ್ಞಾನಿಕವಾಗಿ ಮೌಲ್ಯವನ್ನು ಗೊತ್ತುಪಡಿಸಬೇಕಿದೆ. ಮಾರ್ಚ್ 31ರೊಳಗೆ ಈ ಬೇಡಿಕೆ ಈಡೇರಿಸದಿದ್ದಲ್ಲಿ, ಅರಣ್ಯ ಇಲಾಖೆಯ ನಿಯಮಗಳನ್ನು ಧಿಕ್ಕರಿಸಿ ಶ್ರೀಗಂಧವನ್ನು ನಿರ್ವಹಣೆ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.