ADVERTISEMENT

ಪೊಲೀಸ್ ವಸತಿಗೃಹದಲ್ಲಿ ಸ್ಕೌಟ್ಸ್–ಗೈಡ್ಸ್ ಮುಕ್ತದಳ: ಪಿ.ಜಿ.ಆರ್.ಸಿಂಧ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 15:40 IST
Last Updated 10 ಅಕ್ಟೋಬರ್ 2025, 15:40 IST
   

ಬೆಂಗಳೂರು: ‘ಪೊಲೀಸ್ ವಸತಿಗೃಹ ಸಮುಚ್ಚಯದಲ್ಲಿ ಸ್ಕೌಟ್ಸ್‌–ಗೈಡ್ಸ್ ಮುಕ್ತದಳವನ್ನು ತೆರೆದು, ಅಲ್ಲಿಯ ಮಕ್ಕಳಿಗೆ ಸ್ಕೌಟ್ಸ್‌–ಗೈಡ್ಸ್ ಶಿಕ್ಷಣ ನೀಡುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸ್ಥೆಯ ಈ ಕ್ರಮಕ್ಕೆ ಪೊಲೀಸ್ ಕಮಿಷನರ್ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಸಂಸ್ಥೆಯು ಸಮುದಾಯ ಅಭಿವೃದ್ಧಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ರೋವರ್‌-ರೇಂಜರ್‌ ದಳಗಳನ್ನು ಸ್ಥಾಪಿಸಿ, ಕಾರ್ಯಕ್ರಮ ಮತ್ತು ತರಬೇತಿಗಳನ್ನು ಜಾರಿಗೊಳಿಸಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಯುವ ಆಪ್ತ ಮಿತ್ರ ಯೋಜನೆಯಡಿ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ 3,650 ರೋವರ್ಸ್–ರೇಂಜರ್ಸ್‌ಗಳಿಗೆ ವಿಪತ್ತು ನಿರ್ವಹಣಾ ತರಬೇತಿ ನೀಡುವ ಗುರಿ‌ ಹೊಂದಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿಯಲ್ಲಿ 650 ರೋವರ್ಸ್–ರೇಂಜರ್ಸ್‌ಗಳಿಗೆ ತರಬೇತಿ ನೀಡಲಾಗಿದೆ. ರಾಯಚೂರು, ಕಲಬುರಗಿ, ಯಾದಗಿರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 2026ರ ಮಾರ್ಚ್‌ನೊಳಗೆ ತರಬೇತಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಮಕ್ಕಳು ಹಾಗೂ ಶಿಕ್ಷಕರು ಸಮಾಜಮುಖಿ ಕಾರ್ಯಕ್ರಮ ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗಲು ಪ್ರಸಕ್ತ ಸಾಲಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.