ADVERTISEMENT

ಆಸ್ತಿ ತೆರಿಗೆ ಪಾವತಿಸದ ಮಾಲ್‌, ಹೋಟೆಲ್‌ ಬ್ಯಾಂಕ್‌ ಖಾತೆ ಮುಟ್ಟುಗೋಲು: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 15:26 IST
Last Updated 14 ಡಿಸೆಂಬರ್ 2022, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಆಸ್ತಿ ತೆರಿಗೆ ಪಾವತಿಸದ ಬೃಹತ್‌ ಮಾಲ್‌ ಹಾಗೂ ಹೋಟೆಲ್‌ಗಳ ಬ್ಯಾಂಕ್‌ ಖಾತೆಯನ್ನು ಪ್ರಥಮವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

‘ಬೃಹತ್‌ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡವರಿಗೆಆಸ್ತಿ ತೆರಿಗೆ ಪಾವತಿಸುವಂತೆ ಸಾಕಷ್ಟು ಬಾರಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಆದರೂ, ಪಾವತಿಸಿಲ್ಲ. ಹೀಗಾಗಿ, ಕಾನೂನಿನಲ್ಲಿ ಅವಕಾಶ ಇರುವಂತೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ’ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

‘ಮೊದಲು ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅವರು ತೆರಿಗೆ ಪಾವತಿಸಿದ ಮೇಲಷ್ಟು ಅದನ್ನು ಬಿಡಲಾಗುತ್ತದೆ. ಇದಕ್ಕೂ ಮಣಿಯದಿದ್ದರೆ ಚರಾಸ್ತಿ, ಸ್ಥಿರಾಸ್ತಿಗಳನ್ನು ವಶಪಡಿಸಿಕೊಳ್ಳವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

ಪಾರ್ಕಿಂಗ್‌ ನಿಷೇಧ: ‘ಬಿಬಿಎಂಪಿ ವತಿಯಿಂದ ಬಹು ಅಂತಸ್ತಿನಕಾರು ಪಾರ್ಕಿಂಗ್‌ಗೆ ಚಾಲನೆ ದೊರೆತ ಮೇಲೆ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಲುಗಡೆ ನಿಷೇಧ ಮಾಡಲಾಗುತ್ತದೆ. ಸಂಚಾರ ಪೊಲೀಸರೊಂದಿಗೆ ದಂಡ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

‘ಬಹು ಅಂತಸ್ತಿನ ಕಾರು ಪಾರ್ಕಿಂಗ್‌ ವ್ಯವಸ್ಥೆ ಅಲ್ಲದೆ, ಪ್ರಮುಖ ರಸ್ತೆಗಳಲ್ಲೂ ಪಾವತಿ–ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗುತ್ತಿದ್ದು, ಉಳಿದ ಕಡೆ ವಾಹನ ನಿಷೇಧಿಸಲಾಗುತ್ತದೆ. ಅಲ್ಲಿ ದಂಡ ವಿಧಿಸಲಾಗುವುದು. ವಾಹನಗಳ ಟೋಯಿಂಗ್‌ ಅನ್ನು ನಾವು ಮಾಡಲು ಸಾಧ್ಯವಿಲ್ಲ. ಪೊಲೀಸರು ಯಾವ ಕ್ರಮ ಅನುಸಿರುತ್ತಿದ್ದಾರೋ ಅದನ್ನೇ ಮುಂದುವರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.