ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕೆಂಗೇರಿ ಹಾಗೂ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಕಾರ್ಮಿಕ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿದ್ದಾರೆ.
ಹೆಬ್ಬಾಳದ ಜಕ್ಕೂರು ಲೇಔಟ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರ್ಮಿಕ, ಲಕ್ಷ್ಮೀಪುರದ ನಿವಾಸಿ ರಮೇಶ್(56) ಅವರು ಮೃತಪಟ್ಟಿದ್ದಾರೆ.
ಜಕ್ಕೂರು ಲೇಔಟ್‌ನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಅಲ್ಲಿ ರಮೇಶ್ ಅವರು ಕೆಲಸ ಮಾಡುತ್ತಿದ್ದರು. ಸಿಮೆಂಟ್ ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್‌ವೊಂದು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದಿತ್ತು. ಸಿಮೆಂಟ್ ಇಟ್ಟಿಗೆಗಳನ್ನು ಸ್ಥಳದಲ್ಲಿ ಅನ್‌ಲೋಡ್ ಮಾಡಿ ಟ್ರ್ಯಾಕ್ಟರ್ ಅನ್ನು ಚಾಲಕ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರಮೇಶ್ ಅವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ್ದ ಟ್ರಕ್‌ವೊಂದಕ್ಕೆ ಬೈಕ್ ಡಿಕ್ಕಿಯಾಗಿ ಬಾಗಲಕೋಟೆಯ ಕನಕಮಾದರ (19) ಅವರು ಮೃತಪಟ್ಟಿದ್ದಾರೆ. ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಬುಧವಾರ ಬೆಳಿಗ್ಗೆ ಎಲೆಕ್ಟ್ರಾನಿಕ್ ಸಿಟಿಗೆ ಕೆಲಸಕ್ಕೆ ಹೋಗಲು ಬೈಕ್‌ನಲ್ಲಿ ಮಾದಾವರ ಜಂಕ್ಷನ್ ಮೂಲಕ ತಿರುವು ತೆಗೆದುಕೊಂಡು ತೆರಳುತ್ತಿದ್ದರು. ನೈಸ್ ರಸ್ತೆಯ ಆರ್‌ಎಂಸಿ ಸೇತುವೆ ಬಳಿ ಟ್ರಕ್‌ವೊಂದು ನಿಂತಿತ್ತು. ವೇಗವಾಗಿ ಬಂದ ಬೈಕ್ ಟ್ರಕ್‌ಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಅವರು ಗಾಯಗೊಂಡಿದ್ದರು. ಗಸ್ತಿನಲ್ಲಿ ಸಂಚಾರ ಸಿಬ್ಬಂದಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸವಾರ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಎಫ್‌ಐಆರ್ ದಾಖಲು: ಮೇಲ್ಸೇತುವೆ ಸೇರಿದಂತೆ ವಿವಿಧೆಡೆ ವ್ಹೀಲಿ ನಡೆಸುವ ಪುಂಡರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೊಲೀಸರು, ನಿಯಮ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಬಿಸಿ ಮುಟ್ಟಿಸುತ್ತಿದ್ದಾರೆ. ವ್ಹೀಲಿ ನಡೆಸುತ್ತಿದ್ದ ಸವಾರನನ್ನು ಪತ್ತೆಹಚ್ಚಿ ವೈಟ್‌ಫೀಲ್ಡ್ ಠಾಣೆ ಪೊಲೀಸ್ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.