ADVERTISEMENT

ಅಂಗವಿಕಲರ ಶಾಲೆಗಳಿಗೆ ಒಂದೇ ಸೂರಿನಡಿ ಸೌಲಭ್ಯ

ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚೆ l ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:21 IST
Last Updated 26 ಜನವರಿ 2021, 19:21 IST
ಕಾರ್ಯಕ್ರಮದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಅವರು ನಿರಂಜನ ಆರ್.ಭಟ್ಟ ಅವರಿಗೆ ‘ಡಾ.ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ದೀಪ ಆರ್.ಭಟ್ಟ, ಶಾಂತಾ ರಾಧಾಕೃಷ್ಣ, ವಿ.ಮುನಿರಾಜು ಹಾಗೂ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಎಸ್‌.ರವೀಂದ್ರ ಭಟ್ಟ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಅವರು ನಿರಂಜನ ಆರ್.ಭಟ್ಟ ಅವರಿಗೆ ‘ಡಾ.ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ದೀಪ ಆರ್.ಭಟ್ಟ, ಶಾಂತಾ ರಾಧಾಕೃಷ್ಣ, ವಿ.ಮುನಿರಾಜು ಹಾಗೂ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಎಸ್‌.ರವೀಂದ್ರ ಭಟ್ಟ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಅಂಗವಿಕಲ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಸಿಗುವಂತಹ ಸರಳೀಕೃತ ವ್ಯವಸ್ಥೆ ತರಲು ಪ್ರಯತ್ನಿಸುತ್ತೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಭರವಸೆ ನೀಡಿದರು.

ಗಿರಿನಗರದಲ್ಲಿ ಮಂಗಳವಾರ ನಡೆದ ಎಸ್‌ಜಿಎಸ್‌ ವಾಗ್ದೇವಿ ಸಂಪರ್ಕ ನ್ಯೂನತೆವುಳ್ಳವರ ಪುನಶ್ಚೇತನ ಕೇಂದ್ರದ ರಜತ ಮಹೋತ್ಸವ ಹಾಗೂ‘ಡಾ.ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಾಕ್‌ ಮತ್ತು ಶ್ರವಣ ದೋಷವೂ ಸೇರಿದಂತೆ ಅಂಗವೈಕಲ್ಯದಿಂದ ಕೂಡಿ ರುವ ಮಕ್ಕಳ ಶಾಲೆಗಳು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಗಳ ವ್ಯಾಪ್ತಿಗೆ ಒಳಪಡುತ್ತವೆ. ಸೌಲಭ್ಯಗಳಿಗಾಗಿ ಈ ಶಾಲೆಗಳು ಎರಡು ಇಲಾಖೆಗಳತ್ತ ಮುಖಮಾಡಬೇಕು. ಇಂತಹ ಶಾಲೆಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಸರಳೀಕರಣ ವ್ಯವಸ್ಥೆ ತರಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಅಂಗವಿಕಲರ ಸಮಸ್ಯೆಗಳನ್ನು ರವೀಂದ್ರ ಭಟ್ಟ ಅವರು ಬರೆದಿರುವ ‘ಮೂರನೇ ಕಿವಿ’ ಪುಸ್ತಕದಿಂದ ಓದಿ ಅರಿತಿದ್ದೇನೆ.ನ್ಯೂನತೆಯಿಂದ ಕೂಡಿರುವ ಮಕ್ಕಳಿಗೆ ಸೇವೆ ನೀಡುತ್ತಿರುವಎಸ್‌ಜಿಎಸ್‌ ವಾಗ್ದೇವಿ ಕೇಂದ್ರವು ರಾಜ್ಯದಲ್ಲೇ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ವಿ.ಮುನಿರಾಜು,‘ಸಾಮಾನ್ಯ ಮಕ್ಕಳಿಗಿಂತ ಅಂಗವಿಕಲ ಮಕ್ಕಳ ಕಡೆಗೆ ಪೋಷಕರು ಹೆಚ್ಚು ಗಮನ ಕೊಡುವುದು ಅಗತ್ಯ. ಪೋಷಕರ ಕಾಳಜಿ ಮತ್ತು ಆರೈಕೆ ಇಂತಹ ಮಕ್ಕಳಿಗೆ ಧೈರ್ಯ ತುಂಬುತ್ತದೆ. ವಾಗ್ದೇವಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸೇವೆ ಸಿಗುತ್ತಿದೆ. ಪೋಷಕರಿಗೂ ವಿಶೇಷ ತರಬೇತಿ ಹೆಚ್ಚು ಪರಿಣಾಮಕಾರಿ’ ಎಂದರು.

ಸಂಸ್ಥೆಯ ನಿರ್ದೇಶಕಿ ಶಾಂತಾ ರಾಧಾಕೃಷ್ಣ, ‘ವಿಶೇಷ ಮಕ್ಕಳಿಗಾಗಿ ನುರಿತ ಶಿಕ್ಷಕರು ನಗರ ಪ್ರದೇಶಗಳಲ್ಲಿ ಲಭ್ಯ ಇದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಕೊರತೆ ಇದೆ. ಇದಕ್ಕಾಗಿ ಸಂಸ್ಥೆಯು ಪ್ರತಿ ವರ್ಷ ರಾಜ್ಯದ ವಿವಿಧ ಭಾಗಗಳ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುತ್ತಿದೆ’ ಎಂದರು.

ಪ್ರಶಸ್ತಿ ಪ್ರದಾನ:ಸಂಸ್ಥೆಯವತಿಯಿಂದ ವಾಕ್‌ ಮತ್ತು ಶ್ರವಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ‘ಡಾ.ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ’ಯನ್ನು ರಾಮೋಹಳ್ಳಿಯ ನಿರಂಜನ ಆರ್‌.ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು.

₹10 ಸಾವಿರ ನಗದು ಪುರಸ್ಕಾರ ವನ್ನು ಸಂಸ್ಥೆಯ ಮಕ್ಕಳ ಕಲಿಕೆಗಾಗಿ ನಿರಂಜನ ಅವರು ದೇಣಿಗೆ ನೀಡಿದರು.

ಹುಟ್ಟಿನಿಂದ ಶ್ರವಣ ದೋಷ ಹೊಂದಿದ್ದ ನಿರಂಜನ, ಮೈಸೂರಿನ ರೋಟರಿ ಶ್ರವಣದೋಷವುಳ್ಳ ಮಕ್ಕಳ ಮತ್ತು ತಾಯಂದಿರ ಶಾಲೆಯಲ್ಲಿ ಮಾತು ಕಲಿತಿದ್ದರು. ಪಿಯುಸಿಯಲ್ಲಿ ಶೇ 83 ಅಂಕ, ಎಸ್ಸೆಸ್ಸೆಲ್ಸಿ ಯಲ್ಲಿ ಶೇ 79 ಅಂಕ ಹಾಗೂ ಜೆಇಇ ಮುಖ್ಯ ಪರೀಕ್ಷೆಯಲ್ಲಿ ದೇಶಕ್ಕೆ 307ನೇ ರ‍್ಯಾಂಕ್ ಪಡೆದಿದ್ದಾರೆ. ನಿರಂಜನ ಅವರು ಸುರತ್ಕಲ್‌ ಎನ್‌ಐಟಿಕೆಯಲ್ಲಿ ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.