ADVERTISEMENT

ಶರಣರ ಚಿಂತನೆ ಕುರಿತು ಇಂಗ್ಲಿಷ್‌ ಪುಸ್ತಕ ಪ್ರಕಟಿಸಲು ₹5 ಕೋಟಿ: ಎಂ‌.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:27 IST
Last Updated 17 ನವೆಂಬರ್ 2025, 15:27 IST
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ವತಿಯಿಂದ ವಿವಿಧ ಸಾಧಕರಿಗೆ ಸನ್ಮಾನ ಮಾಡಲಾಯಿತು. ವಿಶ್ವೇಶ್ವರ ಭಟ್‌, ಎಸ್‌. ಷಡಕ್ಷರಿ, ಬಸವರಾಜ ಬೊಮ್ಮಾಯಿ, ಎಂ.ಬಿ. ಪಾಟೀಲ, ಸಿ. ಸೋಮಶೇಖರ ಪಾಲ್ಗೊಂಡಿದ್ದರು
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ವತಿಯಿಂದ ವಿವಿಧ ಸಾಧಕರಿಗೆ ಸನ್ಮಾನ ಮಾಡಲಾಯಿತು. ವಿಶ್ವೇಶ್ವರ ಭಟ್‌, ಎಸ್‌. ಷಡಕ್ಷರಿ, ಬಸವರಾಜ ಬೊಮ್ಮಾಯಿ, ಎಂ.ಬಿ. ಪಾಟೀಲ, ಸಿ. ಸೋಮಶೇಖರ ಪಾಲ್ಗೊಂಡಿದ್ದರು   

ಬೆಂಗಳೂರು: ‘ಬಸವಾದಿ ಶರಣರು ಮತ್ತು ಅನುಭವ ಮಂಟಪದಲ್ಲಿನ ಚಿಂತನೆಗಳನ್ನು ಕುರಿತು ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನು ಪ್ರಕಟಿಸಲು ₹ 5 ಕೋಟಿ ದೇಣಿಗೆ ನೀಡುತ್ತೇನೆ’ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ‌ ಏರ್ಪಡಿಸಿದ್ದ ‘ರಮಣಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಸಾಧಕರಾದ ಫ.ಗು.ಹಳಕಟ್ಟಿ, ಸರ್ ಸಿದ್ದಪ್ಪ ಕಂಬಳಿ, ಲಿಂಗರಾಜ ದೇಸಾಯಿ, ಬಂತನಾಳದ ಪೂಜ್ಯರು, ಸಿದ್ಧೇಶ್ವರ ಸ್ವಾಮೀಜಿ ಅವರ ಬಗ್ಗೆ ಪುಸ್ತಕಗಳು ಪ್ರಕಟವಾಗಬೇಕು. ಬೆಂಗಳೂರು ಭಾಗದ ಸರ್ ಪುಟ್ಟಣ್ಣ ಚೆಟ್ಟಿ ಅಂಥವರ ಬಗ್ಗೆಯೂ ತಿಳಿಯಬೇಕು. ಈ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎನ್ನುವ ಭೇದ ಅಳಿಯಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಫ.ಗು.ಹಳಕಟ್ಟಿ ಅವರು ಇಲ್ಲದೆ ಹೋಗಿದ್ದರೆ ಬಸವ ಧರ್ಮವಾಗಲಿ, ವಚನ ಸಾಹಿತ್ಯವಾಗಲಿ, ನೂರಾರು ವಚನಕಾರರಾಗಲಿ ಬೆಳಕಿಗೆ ಬರುತ್ತಿರಲಿಲ್ಲ. ಅವರು ಮತ್ತು ಬಂತನಾಳದ ಪೂಜ್ಯರು ಸರ್ವಸ್ವವನ್ನೂ ತ್ಯಾಗ ಮಾಡಿ ವಚನ ಯುಗದ ಬಗ್ಗೆ ಬೆಳಕು ಚೆಲ್ಲುವ ಮಹಾನ್ ಕೆಲಸ ಮಾಡಿಹೋಗಿದ್ದಾರೆ. ಹಳಕಟ್ಟಿ ಅವರು ಆರಂಭಿಸಿದ್ದ ‘ಶಿವಾನುಭವ’ ಪತ್ರಿಕೆಯನ್ನು ಸದ್ಯದಲ್ಲೇ ಪುನಾರಂಭ ಮಾಡಲಾಗುವುದು’ ಎಂದರು.

ಲೇಖಕ ಎಸ್.ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು- ಭಾಗ 15’ ಪುಸಕ್ತವನ್ನು ಈ ಸಂದರ್ಭದಲ್ಲಿ ಜನಾರ್ಪಣೆ ಮಾಡಲಾಯಿತು.

ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ, ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ, ಸಾಹಿತಿ ಗೊ.ರು. ಚನ್ನಬಸಪ್ಪ ಉಪಸ್ಥಿತರಿದ್ದರು.

ಬಸವಣ್ಣನವರಂತಾಗೋಣ: ಬೊಮ್ಮಾಯಿ

‘ನಾವ್ಯಾರೂ ದೇವರಾಗಲು ಬಂದಿಲ್ಲ. ಬಸವಣ್ಣನ ಹಾಗೇ ಒಳ್ಳೆಯ ಮಾನವ ಆಗಬೇಕು. ಶರಣ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರೆ ಅದಕ್ಕೆ ಗೊ.ರು. ಚನ್ನಬಸಪ್ಪ ಅವರು ಕಾರಣ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ‘ಬಸವಣ್ಣ ಜಾಗತಿಕ ವ್ಯಕ್ತಿ. ಅದಕ್ಕೇ ಅವರನ್ನು ಜಗಜ್ಯೋತಿ ಬಸವೇಶ್ವರ ಎಂದು ಕರೆಯುತ್ತಾರೆ. ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.