ADVERTISEMENT

ಶಿವಗಂಗೆ ದನಗಳ ಜಾತ್ರೆ ಕಣ್ಮರೆ! ಜಾತ್ರೆಗೆ ಬಾರದ ರಾಸುಗಳು.. ಗ್ರಾಮಸ್ಥರ ಬೇಸರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 23:30 IST
Last Updated 5 ಜನವರಿ 2026, 23:30 IST
ಜಾನುವಾರುಗಳು ಸೇರುತ್ತಿದ್ದ ಹಿಪ್ಪೆ ತೋಪು
ಜಾನುವಾರುಗಳು ಸೇರುತ್ತಿದ್ದ ಹಿಪ್ಪೆ ತೋಪು   

ದಾಬಸ್ ಪೇಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಸರಾಗಿದ್ದ ನೆಲಮಂಗಲ ತಾಲ್ಲೂಕಿನ ‘ಶಿವಗಂಗೆ ಗಂಗಾಧರೇಶ್ವರ ದನಗಳ ಜಾತ್ರೆ’ ಈ ವರ್ಷ ನಡೆದಿಲ್ಲ.

‘ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿದ್ದ ಜಾತ್ರೆ ಈ ವರ್ಷ ಸಂಪೂರ್ಣ ನಿಂತು ಹೋಗಿರುವುದು ಬೇಸರ ತಂದಿದೆ. ಕೆಲವು ವರ್ಷಗಳ ಹಿಂದೆ ಸಾವಿರಕ್ಕೂ ಅಧಿಕಾರ ಹಸುಗಳು ಜಾತ್ರೆಗೆ ಬರುತ್ತಿದ್ದವು. ಇಲ್ಲಿನ ಹಿಪ್ಪೆ ತೋಪು ಭರ್ತಿಯಾಗಿ ಪಕ್ಕದ ಹೊಲಗಳಲ್ಲಿಯೂ ಜಾನುವಾರುಗಳನ್ನು ಕಟ್ಟುತ್ತಿದ್ದರು’ ಎಂದು ಶಿವಗಂಗೆ ಸಿದ್ದರಾಜು ಹೇಳಿದರು.

‘ನಮ್ಮ ಭಾಗದಲ್ಲಿ ಕೆಐಡಿಬಿಗೆ ರೈತರ ಜಮೀನು ಹೋಗಿದ್ದು, ವ್ಯವಸಾಯ ಮಾಡುವವರು ಇಲ್ಲ, ಜಾನುವಾರುಗಳನ್ನು ಸಾಕುತ್ತಿಲ್ಲ. ಇದರಿಂದ ಜಾತ್ರೆಗೆ ದನಗಳೇ ಬಂದಿಲ್ಲ. ಹಿಪ್ಪೆ ತೋಪು ಕಡಿಮೆಯಾಗಿದೆ. ಒಂದು ಕಡೆ ಪ್ರವಾಸಿ ಮಂದಿರ ಇನ್ನೊಂದು ಕಡೆ ಯಾತ್ರೆ ನಿವಾಸ ನಿರ್ಮಾಣ ಆಗಿ ದನಗಳ ಜಾತ್ರೆಗೆ ಜಾಗವೂ ಇಲ್ಲವಾಗಿದೆ’ ಎಂದರು.

ADVERTISEMENT

‘ಅಕ್ಕಪಕ್ಕದ ಜಿಲ್ಲೆ ತಾಲ್ಲೂಕುಗಳಿಂದ ರೈತರು ಜಾತ್ರೆಗೆ ರಾಸುಗಳನ್ನು ಕರೆತರುತ್ತಿದ್ದರು.
ಬದಲಾದ ಜೀವನ ಶೈಲಿ, ರೈತರು ಕೃಷಿಯನ್ನು ಯಂತ್ರಗಳ ಮೂಲಕ ಮಾಡುತ್ತಿರುವುದು, ರಾಸುಗಳ ಸಾಕಾಣಿಕೆ ವೆಚ್ಚದ ಹೆಚ್ಚಳದಿಂದ ಗ್ರಾಮೀಣ ಜನರು ವಿಮುಖರಾಗುತ್ತಿದ್ದಾರೆ’ ಎಂದು  ರೈತ ಆನಂದ್ ಹೇಳಿದರು.

‘ನಾಟಿ ದನಗಳನ್ನು ಸಾಕುವುದನ್ನು ಬಿಡುತ್ತಿದ್ದಾರೆ. ಹಾಗಾಗಿ ಜಾತ್ರೆಗೆ ಜಾನುವಾರುಗಳು ಬರುತ್ತಿಲ್ಲ’ ಎಂದರು.

‘ಜಾತ್ರೆ ಎಂದರೆ ರಾಸುಗಳ ಮಾರಾಟ ಹಾಗೂ ಕೊಂಡುಕೊಳ್ಳುವುದು ಅಷ್ಟೇ ಅಲ್ಲ. ಹತ್ತಾರು ಜನಕ್ಕೆ ಜೀವನೋಪಾಯದ ದಾರಿಯಾಗಿತ್ತು. ಕೊಳ್ಳುವವರ ಮಾರುವವರ ಮಧ್ಯೆ ದಳ್ಳಾಳಿಗಳು ವ್ಯಾಪಾರ ಕುದುರಿಸಿ ಕಮಿಷನ್ ಪಡೆಯುತ್ತಿದ್ದರು. ಸಣ್ಣ ಹೋಟೆಲ್‌ಗಳು ಇತರ ಅಂಗಡಿಗಳ ತೆರೆದು ವ್ಯಾಪಾರ ಮಾಡುತ್ತಿದ್ದರು’ ಎಂದು ಹೇಳಿದರು.

‘ಹತ್ತಾರು ವರ್ಷಗಳಲ್ಲಿ ಇದೇ ಮೊದಲ ಬಾರಿ ಒಂದು ರಾಸು ಕೂಡ ಕಾಣದೆ ಮುರೀಚಿಕೆಯಾಗಿದೆ. ಈ ಹಿಂದೆ ನೂರಾರು ಕಿಲೋಮೀಟರ್ ಇಂದ ರಾಸುಗಳನ್ನು ಕರೆದುಕೊಂಡು ಬರುತ್ತಿದ್ದರು. ಈ ಬಾರಿ ಯಾರು ಬಂದಿಲ್ಲ. ಪಶು ಸಂಗೋಪನೆ ಇಲಾಖೆಯಿಂದ ಉತ್ತಮ ರಾಸುಗಳಿಗೆ ಜಾತ್ರೆ ದಿನ ಬಹುಮಾನ ವಿತರಣೆ ಮಾಡುತ್ತಿದ್ದರು. ಆದರೆ ಈ ವರ್ಷ ಇದೆಲ್ಲ ಕಾಣದಾಗಿದೆ’ ಎಂದು ರೈತ
ಹನುಮಂತರಾಯಪ್ಪ ತಿಳಿಸಿದರು.

‘ಘಾಟಿ ಜಾತ್ರೆಯ ನಂತರ ಶಿವಗಂಗೆ ಜಾತ್ರೆ ಸೇರಬೇಕಿತ್ತು. ಗ್ರಾಮ ಪಂಚಾಯಿತಿ ಪಶುಸಂಗೋಪನೆ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಹಕಾರದಲ್ಲಿ ಜಾತ್ರಾ ಮೈದಾನ ಸ್ವಚ್ಛತೆ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿ ಅಗತ್ಯ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ರಾಸುಗಳು ಬಂದಿಲ್ಲ’ ಎಂದು ಶಿವಗಂಗೆಯ ಗಂಗಾಧರೇಶ್ವರ ಹೊನ್ನಾದೇವಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ಬೃಂದಾ ಮಾಹಿತಿ ನೀಡಿದರು.

‘ಇದೇ ಮೊದಲ ಬಾರಿಗೆ ಒಂದೇ ಒಂದು ರಾಸು ಜಾತ್ರೆಗೆ ಬಂದಿಲ್ಲ. ರೈತರಲ್ಲಿ ಜಾತ್ರೆಯ ಆಸಕ್ತಿ ಕಡಿಮೆ ಆದಂತಿದೆ. ನೀರು, ಊಟ, ಬಹುಮಾನ ಎಲ್ಲ ಸೌಲಭ್ಯ ಕೊಟ್ಟರೂ ಜಾತ್ರೆಗೆ ದನ ಬಾರದಿರುವುದು ಆಶ್ಚರ್ಯ’ ಎಂದು ಶಿವಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.

‘ಜಾತ್ರೆ ಕಾಲಕ್ಕೆ ಇಲ್ಲಿನ ಶಾಲೆಗಳಿಗೆ ಒಂದು ವಾರ ರಜೆ ಕೊಡುತ್ತಿದ್ದರು. ರಾಸುಗಳ ಸಂಖ್ಯೆ ಜಾಸ್ತಿ ಇರುತ್ತಿತ್ತು. ಓಡಾಡಲು ಕೂಡ ಸಾಧ್ಯವಾಗುತ್ತಿರುತ್ತಿಲ್ಲ. ಆದರೆ, ನಮ್ಮ ಕಣ್ಣಮುಂದೆ ಜಾತ್ರೆ ದನವೇ ಇಲ್ಲವಾಗಿವೆ’ ಎಂದು ಹೊಸಪಾಳ್ಯದ ಎಸ್ ಆರ್ ಸುರೇಶ್ ತಿಳಿಸಿದರು.

ಜಾನುವಾರುಗಳು ಸೇರುತ್ತಿದ್ದ ಹಿಪ್ಪೆ ತೋಪು
-ಶ್ರೀನಿವಾಸ್ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಗಂಗೆ
ಎಸ್ ಆರ್ ಸುರೇಶ್ ಹೊಸಪಾಳ್ಯ
ಎಮ್.ಎನ್.ಬೃಂದಾ ಕಾರ್ಯನಿರ್ವಹಣಾಧಿಕಾರಿ ಗಂಗಾಧರೇಶ್ವರ ಹೊನ್ನಾದೇವಿ ದೇವಾಲಯ ಶಿವಗಂಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.