ADVERTISEMENT

ಬೆಂಗಳೂರು: ಕಾಮಗಾರಿ ಮುಗಿಸಲು 3 ತಿಂಗಳ ಗಡುವು

ಶಿವರಾಮ ಕಾರಂತ ಬಡಾವಣೆಯಲ್ಲಿ 30 ಸಾವಿರ ನಿವೇಶನಗಳ ಅಭಿವೃದ್ಧಿಗೆ ವೇಗ

ಕೆ.ಎಸ್.ಸುನಿಲ್
Published 12 ಏಪ್ರಿಲ್ 2025, 0:00 IST
Last Updated 12 ಏಪ್ರಿಲ್ 2025, 0:00 IST
ಶಿವರಾಮ ಕಾರಂತ ಬಡಾವಣೆ ಕಾಮಗಾರಿ ನಡೆಯುತ್ತಿರುವ ದೃಶ್ಯ (ಸಂಗ್ರಹ ಚಿತ್ರ) 
ಶಿವರಾಮ ಕಾರಂತ ಬಡಾವಣೆ ಕಾಮಗಾರಿ ನಡೆಯುತ್ತಿರುವ ದೃಶ್ಯ (ಸಂಗ್ರಹ ಚಿತ್ರ)    

ಬೆಂಗಳೂರು: ನಗರದ ಉತ್ತರ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಡಾ.ಶಿವರಾಮ ಕಾರಂತ (ಎಸ್‌.ಕೆ) ಬಡಾವಣೆಯಲ್ಲಿ ಮೂವತ್ತು ಸಾವಿರ ನಿವೇಶನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮೂರು ತಿಂಗಳು ಗಡುವು ನೀಡಲಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯಾವುದೇ ಬಡಾವಣೆಗಳ ನಿರ್ಮಾಣ ವಾಗಲಿ, ನಿವೇಶನಗಳ ಹಂಚಿಕೆಯಾಗಲಿ ಮಾಡಿರಲಿಲ್ಲ. ಹಾಗಾಗಿ ಶಿವರಾಮ ಕಾರಂತ (ಎಸ್‌.ಕೆ.) ಬಡಾವಣೆಯಲ್ಲಿ ನಿವೇಶನ ಖರೀದಿಸಲು ಜನರು ಕಾಯುತ್ತಿದ್ದಾರೆ.

ಬಡಾವಣೆಯಲ್ಲಿ 30 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸಲಾಗಿದ್ದು, 16-17 ಸಾವಿರ ನಿವೇಶನಗಳನ್ನು ರೈತರಿಗೆ ನೀಡಲಾಗುತ್ತದೆ. 30X40 ಅಡಿ ಮತ್ತು 40X60 ಅಡಿ ಅಳತೆಯ ನಿವೇಶನಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ನಾಲ್ಕು ಸಾವಿರಕ್ಕೂ ಅಧಿಕ ಮೂಲೆ ನಿವೇಶನಗಳಿವೆ. ಸುಮಾರು 7-8 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆಗೆ ಸಿಗಲಿವೆ. ಒಂದು ಚದರ ಅಡಿಗೆ ₹4,900 ದರ ನಿಗದಿಪಡಿಸಲಾಗಿದೆ.

ADVERTISEMENT

‘ಏಪ್ರಿಲ್ ಅಂತ್ಯದ ವೇಳೆಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಕಾಮಗಾರಿ ಶೇಕಡ 80ರಷ್ಟು ಪೂರ್ಣಗೊಂಡಿದೆ. ರಸ್ತೆ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆ ಸೇರಿದಂತೆ ನಾನಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ.

ಇತ್ತೀಚೆಗೆ, ಸುಪ್ರೀಂ ಕೋರ್ಟ್ ಬಿಡಿಎಗೆ ಸುಮಾರು 200 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

‘ಬಡಾವಣೆಯಲ್ಲಿನ ಒಂಬತ್ತು ಸೆಕ್ಟರ್‌ಗಳ ಪೈಕಿ ಕೆಲವು ಸೆಕ್ಟರ್‌ಗಳಲ್ಲಿ ಶೇಕಡ 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮತ್ತೆ ಕೆಲ ಸೆಕ್ಟರ್‌ಗಳಲ್ಲಿ ಶೇಕಡ 80ರಷ್ಟು ಕೆಲಸವಾಗಿದೆ. ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಬ್ಲಾಕ್‌ಗಳಲ್ಲಿ ನಿವೇಶನಗಳನ್ನು ಗುರುತಿಸಿ, ಅಡ್ಡ ರಸ್ತೆಗಳನ್ನು ನಿರ್ಮಿಸಲಾಗಿದೆ. ನೀರಿನ ಸಂಪರ್ಕ ಹಾಗೂ ಒಳಚರಂಡಿ ಪೈಪ್‌ಲೈನ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿಗಳು ಹೇಳಿದರು.
‌ಭೂಸ್ವಾಧೀನ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸದೇ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಬಂತು. ಹಾಗಾಗಿ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಗಳನ್ನು ಆಹ್ವಾನಿಸಿ, ಅಧಿಸೂಚನೆ ಹೊರಡಿಸ ದಂತೆ ನಿರ್ಬಂಧ ವಿಧಿಸಲಾಗಿತ್ತು.

ಈ ಪ್ರಕರಣವು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನ್ಯಾಯಾಲಯ ಆದೇಶ ನೀಡಿದ ಕೂಡಲೇ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು . ಇದಕ್ಕೆ ಎಲ್ಲ ಸಿದ್ಧತೆ ನಡೆದಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

2,782 ಎಕರೆಯಲ್ಲಿ ಬಡಾವಣೆ

2008ರಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 3,546 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಸ್ವಾಧೀನಪಡಿಸಿಕೊಂಡ ಜಮೀನಿನ ಪೈಕಿ 2,782 ಎಕರೆಯಲ್ಲಿ ನಿವೇಶನಗಳನ್ನು ನಿರ್ಮಿಸಲಾಗಿದೆ.

ಬಡಾವಣೆ ನಿರ್ಮಾಣಕ್ಕೆ ಗಾಣಿಗರಹಳ್ಳಿ, ಕಾಳತಮ್ಮನಹಳ್ಳಿ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ರಾಮಗೊಂಡನಹಳ್ಳಿ, ಹಾರೋಹಳ್ಳಿ, ಆವಲಹಳ್ಳಿ, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ಶಾಮರಾಜಪುರ, ವೀರಸಾಗರ ಕೆ.ಬಿ. ಕಾವಲ್‌, ದೊಡ್ಡಬೆಟ್ಟಹಳ್ಳಿ, ವಡೇರಹಳ್ಳಿ, ಕೆಂಪನಹಳ್ಳಿ, ಬ್ಯಾಲಕೆರೆ ಗ್ರಾಮಗಳ ರೈತರಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಶಿವರಾಮ ಕಾರಂತ ಬಡಾವಣೆಯಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಬಾಕಿ ಇರುವ ಕೆಲಸಗಳು ಶೀಘ್ರ ಮುಗಿಯಲಿದೆ.
-ಮೋಹನ್ ಕುಮಾರ್, ಕಾರ್ಯಪಾಲಕ ಎಂಜಿನಿಯರ್, ಬಿಡಿಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.