ADVERTISEMENT

ಬೆಂಗಳೂರು: 28 ಸಿಮ್ ಬಾಕ್ಸ್​, 1,193 ಸಿಮ್ ಕಾರ್ಡ್​ ಜಪ್ತಿ

ಮನೆ ಬಾಡಿಗೆ ಪಡೆದು ಕರೆಗಳ ಪರಿವರ್ತನೆ ದಂಧೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 15:20 IST
Last Updated 4 ಡಿಸೆಂಬರ್ 2025, 15:20 IST
ಜಪ್ತಿ ಮಾಡಿಕೊಂಡ ಸಿಮ್‌ ಹಾಗೂ ಲ್ಯಾಪ್‌ಟಾಪ್‌ 
ಜಪ್ತಿ ಮಾಡಿಕೊಂಡ ಸಿಮ್‌ ಹಾಗೂ ಲ್ಯಾಪ್‌ಟಾಪ್‌    

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಕೇಂದ್ರವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ₹40 ಲಕ್ಷ ಮೌಲ್ಯದ ಪರಿಕರ ಜಪ್ತಿ ಮಾಡಿದ್ದಾರೆ.

28 ಸಿಮ್ ಬಾಕ್ಸ್​ಗಳು, ವಿವಿಧ ಕಂಪನಿಗಳ 1,193 ಸಿಮ್ ಕಾರ್ಡ್​ಗಳು, 1 ಲ್ಯಾಪ್‌ಟಾಪ್,​ 3 ರೂಟರ್‌​​​ ಸೇರಿದಂತೆ ಹಲವು ಉಪಕರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಎಲೆಕ್ಟ್ರಾನಿಕ್​​ ಸಿಟಿಯ ಎರಡನೇ ಹಂತದ ನಾಯ್ಡು ಲೇಔಟ್​ನಲ್ಲಿರುವ ಕಟ್ಟಡವೊಂದರ ನಾಲ್ಕನೇ ಮಹಡಿಯಲ್ಲಿ ಆರೋಪಿಗಳು ಮನೆ ಬಾಡಿಗೆ ಪಡೆದು ಕೃತ್ಯ ಎಸಗುತ್ತಿದ್ದರು. ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಮಿನಿ ಟೆಲಿಫೋನ್‌ ಎಕ್ಸ್‌ಚೇಂಜ್​ ರೀತಿಯಲ್ಲಿ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗುತಿತ್ತು. ಪೊಲೀಸರು ವಶಕ್ಕೆ ಪಡೆದಿರುವ 1,193 ಸಿಮ್ ಕಾರ್ಡ್‌ಗಳಲ್ಲಿ ಕೆಲವು ಸಿಮ್‌ಗಳನ್ನು ಸೈಬರ್ ಅಪರಾಧ, ವಂಚನೆ ಪ್ರಕರಣಗಳಲ್ಲಿ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಒಂದು ವರ್ಷದಿಂದ ಆರೋಪಿಗಳು ಈ ದಂಧೆ ನಡೆಸುತ್ತಿದ್ದರು. ದೂರಸಂಪರ್ಕ ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿರುವುದು ಹಾಗೂ ದೇಶದ ಭದ್ರತೆಗೆ ಅಪಾಯ ಉಂಟು ಮಾಡುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.