ಬೆಂಗಳೂರು: ‘ನಿಮ್ಮ ಸಿಮ್ ಕಾರ್ಡ್ ಅವಧಿ ಮುಗಿದಿದ್ದು, 24 ಗಂಟೆಯಲ್ಲಿ ನಿಷ್ಕ್ರಿಯವಾಗಲಿದೆ. ಇದನ್ನು ತಪ್ಪಿಸಲು ₹ 10 ರೀಚಾರ್ಜ್ ಮಾಡಿಸಿ’ ಎಂಬ ಸಂದೇಶ ಬಂದರೆ ಎಚ್ಚರಿಕೆ ವಹಿಸಿ. ಏಕೆಂದರೆ, ಇಂಥ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಗಳಲ್ಲಿರುವ ಹಣ ದೋಚುತ್ತಿರುವ ಜಾಲ ಸಕ್ರಿಯವಾಗಿದೆ.
ಬಿಎಸ್‌ಎನ್‌ಲ್, ಏರ್‌ಟೆಲ್, ಜಿಯೊ ಸೇರಿದಂತೆ ವಿವಿಧ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲೇ ಇಂಥ ಸಂದೇಶಗಳು ಹಲವರ ಮೊಬೈಲ್‌ಗಳಿಗೆ ಬರುತ್ತಿವೆ. ಇದು ನಿಜವಿರಬಹುದೆಂದು ನಂಬಿ ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸೈಬರ್ ಅಪರಾಧ ಬಗ್ಗೆ ನಗರದಲ್ಲಿ ನಿತ್ಯವೂ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.
‘ಸೈಬರ್ ವಂಚಕರು, ಮೊಬೈಲ್ ಸೇವಾ ಕಂಪನಿಗಳ ರೀತಿಯಲ್ಲೇ ಜನರಿಗೆ ಇಂಗ್ಲಿಷ್‌ನಲ್ಲಿ ಗುಂಪು ಸಂದೇಶ ಕಳುಹಿಸುತ್ತಿದ್ದಾರೆ. ಸಂದೇಶ ನಂಬಿ ಪ್ರತಿಕ್ರಿಯಿಸುವ ಜನರ ಮೊಬೈಲ್‌ನಲ್ಲಿ ‘ಟೀಮ್ ವ್ಹೀವರ್’ ಆ್ಯಪ್ ಇನ್‌ಸ್ಟಾಲ್ ಮಾಡಿಸುತ್ತಿದ್ದಾರೆ. ಅದರ ಮೂಲಕ ವೈಯಕ್ತಿಕ, ಬ್ಯಾಂಕ್ ಖಾತೆ ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ’ ಎಂದು ನಗರದ ಸೈಬರ್ ಕ್ರೈಂ ಠಾಣೆಯೊಂದರ ಇನ್‌ಸ್ಪೆಕ್ಟರ್ ಹೇಳಿದರು.
‘ಗ್ರಾಹಕರ ಮಾಹಿತಿ (ಕೆವೈಸಿ) ಕೋರುವ ವಂಚಕರು, ₹ 10 ರೀಚಾರ್ಜ್ ಮಾಡುವಂತೆ ಒತ್ತಾಯಿಸುತ್ತಾರೆ. ಅದನ್ನು ನಂಬುವ ಜನ, ಆನ್‌ಲೈನ್ ಮೂಲಕವೇ ₹10 ರೀಚಾರ್ಜ್ ಮಾಡಿಸುತ್ತಾರೆ. ಅದಾದ ನಂತರ ಕೆಲ ನಿಮಿಷಗಳಲ್ಲೇ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿದೆ’ ಎಂದೂ ತಿಳಿಸಿದರು.
ಲಕ್ಷಾಂತರ ರೂಪಾಯಿ ಕಳೆದುಕೊಂಡರು: ‘ಬೆಂಗಳೂರಿನ ಎಲ್ಲ ವಿಭಾಗಗಳ ಸೈಬರ್ ಕ್ರೈಂ ಠಾಣೆಯಲ್ಲೂ ‘ಸಿಮ್ ಅಪ್‌ಡೇಟ್’ ವಂಚನೆ ಪ್ರಕರಣಗಳು ದಾಖಲಾಗುತ್ತಿದೆ. ಕೆಲವರು ತಮ್ಮ ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿ ಕಳೆದುಕೊಂಡು ದೂರು ನೀಡಿದ್ದಾರೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.
ಉತ್ತರ ಭಾರತದ ಗ್ಯಾಂಗ್: ‘ಸೈಬರ್ ಚಟುವಟಿಕೆ ಬಗ್ಗೆ ತರಬೇತಿ ಪಡೆದಿರುವ ಉತ್ತರ ಭಾರತದ ಗ್ಯಾಂಗ್ ಈ ಕೃತ್ಯ ಎಸಗುತ್ತಿರುವ ಅನುಮಾನವಿದೆ. ಗ್ಯಾಂಗ್ ಆರೋಪಿಗಳೇ ಜನರಿಗೆ ಏಕಕಾಲದಲ್ಲಿ ಗುಂಪು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅದನ್ನು ನಂಬಿ ಪ್ರತಿಕ್ರಿಯಿಸುವ ಜನರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾರೆ’ ಎಂದೂ ತಿಳಿಸಿದರು.
ಪಾರಾಗಲು ಹೀಗೆ ಮಾಡಿ
* ಸಿಮ್ ಕಾರ್ಡ್ ಅಪ್‌ಡೇಟ್, ಬ್ಯಾಂಕ್ ಅಪ್‌ಡೇಟ್.. ಹೀಗೆ ಹಲವು ಉದ್ದೇಶವಿಟ್ಟುಕೊಂಡು ಬರುವ ಸಂದೇಶಗಳನ್ನು ನಂಬಬೇಡಿ. ಪ್ರತಿಕ್ರಿಯಿಸಬೇಡಿ
* ಸಿಮ್ ಕಾರ್ಡ್ ಅಪ್‌ಡೇಟ್ ಸಂದೇಶ ಬಂದರೆ, ಮೊಬೈಲ್ ಸೇವಾ ಕಂಪನಿಗಳ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಿ
* ಅಪರಿಚಿತರು ಯಾವುದಾದರೂ ಲಿಂಕ್ ಕಳುಹಿಸಿದರೆ ಕ್ಲಿಕ್ ಮಾಡಬೇಡಿ
* ಅಪರಿಚಿತರು ಹೇಳುವ ‘ಟೀಮ್ ವ್ಹೀವರ್’ ಹಾಗೂ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಮುನ್ನ ಯೋಚಿಸಿ
* ಇಂಥ ಸಂದೇಶ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.