ADVERTISEMENT

ಬೆಂಗಳೂರು: 11 ನಾಡ ಬಂದೂಕು‌ ಸಮೇತ ಸಿಕ್ಕಿಬಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 6:05 IST
Last Updated 19 ಫೆಬ್ರುವರಿ 2021, 6:05 IST
ನಾಡ ಬಂದೂಕು ಮಾರಾಟ ಮಾಡಲು‌ ನಗರಕ್ಕೆ ಬಂದಿದ್ದ ಲಿಂಗರಾಜ್‌
ನಾಡ ಬಂದೂಕು ಮಾರಾಟ ಮಾಡಲು‌ ನಗರಕ್ಕೆ ಬಂದಿದ್ದ ಲಿಂಗರಾಜ್‌   

ಬೆಂಗಳೂರು: ಅಕ್ರಮವಾಗಿ ನಾಡ ಬಂದೂಕು ಮಾರಾಟ ಮಾಡಲು‌ ನಗರಕ್ಕೆ ಬಂದಿದ್ದ ಲಿಂಗರಾಜ್‌ನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

'ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ಲಿಂಗರಾಜ್, ತನ್ನ ಬಳಿ ಬಂದೂಕು ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಅದೇ ವೇಳೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ಆತನಿಂದ 11 ನಾಡ ಬಂದೂಕು (ಸಿಂಗಲ್ ಬ್ಯಾರಲ್) ಹಾಗೂ ಬಂದೂಕಿನ ಬಿಡಿ ಭಾಗಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸರು ಹೇಳಿದರು.

'ಬೈಕ್‌ನಲ್ಲಿ ನಗರಕ್ಕೆ ಬಂದಿದ್ದ ಆರೋಪಿ, ಬನಶಂಕರಿ ಮೂರನೇ ಹಂತದ ಇಟ್ಟಮಡು ಬಳಿ ನಿಂತಿದ್ದ. ಬಂದೂಕುಗಳನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿಕೊಂಡಿದ್ದ. ಅನುಮಾನಗೊಂಡ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದ' ಎಂದೂ ಅವರು ತಿಳಿಸಿದರು.

ADVERTISEMENT

'ನಗರದಲ್ಲಿ ಕೆಲವರಿಗೆ ಬಂದೂಕು ಮಾರಾಟ ಮಾಡಲು ಬಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಯಾರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ' ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.