ADVERTISEMENT

ನ್ಯೂ ಮೈಕೋ ಲೇಔಟ್‌ ಅಪಾರ್ಟ್‌ಮೆಂಟ್‌ ಇಂಗುಗುಂಡಿಯಲ್ಲಿ ತಲೆ ಬುರುಡೆ, ಮೂಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 21:04 IST
Last Updated 18 ಜೂನ್ 2025, 21:04 IST
   

ಬೆಂಗಳೂರು: ನ್ಯೂ ಮೈಕೋ ಲೇಔಟ್‌ನ ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ನ ವಾಹನ ನಿಲುಗಡೆ ಸ್ಥಳದ ಇಂಗುಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ.

ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ಕರಿಯಾ ಜಾನ್ ದೂರಿನ ಮೇರೆಗೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ಯುಡಿಆರ್‌ (ಅಸಹಜ ಸಾವು) ಪ್ರಕರಣ ದಾಖಲಾಗಿದೆ.

‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಪತ್ತೆಯಾಗಿರುವುದು ಮನುಷ್ಯನ ತಲೆ ಬುರುಡೆ ಮತ್ತು ಮೂಳೆ ಎಂಬುದು ಗೊತ್ತಾಗಿದೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯೋ ಅಥವಾ ಸಹಜ ಸಾವು ಎಂಬುದನ್ನು ತಿಳಿಯಲು ವರದಿ ಬರುವವರೆಗೂ ಕಾಯಬೇಕು. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಎಂ.ಎನ್ ಕ್ರೆಡೆನ್ಸ್‌ ಫ್ಲೊರಾ ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ತೆರೆದಿದ್ದ ಇಂಗುಗುಂಡಿಯನ್ನು 2012ರಿಂದಲೂ ಸ್ವಚ್ಚ ಮಾಡಿರಲಿಲ್ಲ. 16 ಇಂಗು ಗುಂಡಿಗಳನ್ನು ಸ್ವಚ್ಛಗೊಳಿಸಲು ಅನ್ಬಳಗನ್ ಎಂಬುವರಿಗೆ ವಹಿಸಲಾಗಿತ್ತು. ಅವರು ಕೆಲಸ ಆರಂಭಿಸಿದ್ದರು’ ಎಂದು ಸ್ಕರಿಯಾ ಜಾನ್ ದೂರಿನಲ್ಲಿ ತಿಳಿಸಿದ್ದಾರೆ.

‘ಜೂನ್ 16ರಂದು ಫ್ಲ್ಯಾಟ್‌ ಸಂಖ್ಯೆ 221 ಮತ್ತು 321ರ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿರುವ ಇಂಗು ಗುಂಡಿ ಸ್ವಚ್ಛಗೊಳಿಸುವ ವೇಳೆ ತಲೆಬುರಡೆ ಮತ್ತು ಮೂಳೆ ಪತ್ತೆಯಾಗಿದೆ. ಹಾಗಾಗಿ ಈ ಬಗ್ಗೆ ಮುಂದಿನ ತನಿಖೆ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.