ADVERTISEMENT

ತೂಬು: 46 ಕೆರೆಗಳನ್ನು ಬಿಟ್ಟ ಬಿಬಿಎಂಪಿ

ಸರ್ಕಾರ ಅನುಮೋದಿಸಿದ್ದು 148 ಕೆರೆ; 102ರಲ್ಲಿ ಕಾಮಗಾರಿಗೆ ಮುಂದಾದ ಪಾಲಿಕೆ

Published 1 ಮಾರ್ಚ್ 2023, 4:25 IST
Last Updated 1 ಮಾರ್ಚ್ 2023, 4:25 IST
ಕೆರೆಗಳಲ್ಲಿ ಅಳವಡಿಸುವ ತೂಬುಗಳ ಮಾದರಿ
ಕೆರೆಗಳಲ್ಲಿ ಅಳವಡಿಸುವ ತೂಬುಗಳ ಮಾದರಿ   

ಬೆಂಗಳೂರು: ಅಮೃತ ನಗರೋತ್ಥಾನ ಯೋಜನೆಯಲ್ಲಿ 148 ಕೆರೆಗಳಿಗೆ ‘ಸ್ಲೂಯಿಸ್‌ ಗೇಟ್‌’ (ತೂಬು) ಅಳವಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದರೂ, ಅಷ್ಟು ಹಣವನ್ನು 102 ಕೆರೆಗಳಿಗೇ ಬಿಬಿಎಂಪಿ ವೆಚ್ಚ ಮಾಡುತ್ತಿದೆ.‌ 46 ಕೆರೆಗಳನ್ನು ಕೈಬಿಟ್ಟಿದೆ.

‘ಪೂರ್ವ ಮುಳುಗಿದ ಬೆಂಗಳೂರಿಗೆ’ ಕೆರೆಗಳಿಂದ ಬೃಹತ್‌ ಪ್ರಮಾಣದಲ್ಲಿ ನೀರು ಹರಿದಿದೆ. ಈ ಹರಿವಿನ ಪ್ರಮಾಣ ನಿಯಂತ್ರಿಸಿದರೆ ಮುಳುಗಡೆಯಂತಹ ಸಮಸ್ಯೆ ಬರುವುದಿಲ್ಲ ಎಂದು ಬಿಬಿಎಂಪಿ ತನ್ನ ವ್ಯಾಪ್ತಿಯ 102 ಕೆರೆಗಳಿಗೆ ‘ಸ್ಲೂಯಿಸ್ ಗೇಟ್’ ನಿರ್ಮಿಸಲು ₹36.85 ಕೋಟಿ ವೆಚ್ಚ ಮಾಡಲಿದೆ. ಹಿಂದಿನ ಕಾಲದಲ್ಲಿ ಕೆರೆಗೆ ನೀರನ್ನು ನಿಧಾನವಾಗಿ ಹರಿಸಲು ಕಲ್ಲಿನ ಕಂಬದ ರೂಪದಲ್ಲಿ ನಿರ್ಮಿಸಲಾಗುತ್ತಿದ್ದ ‘ತೂಬು’ ವಿಧಾನವನ್ನೇ ಬಿಬಿಎಂಪಿ ಇದೀಗ ಹೈಟೆಕ್ ಆಗಿ ‘ಸ್ಲೂಯಿಸ್‌ ಗೇಟ್‌’ ಆಗಿ ನಿರ್ಮಿಸುತ್ತಿದೆ.

2022ರ ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ಅತಿಹೆಚ್ಚು ಮಳೆ ಸುರಿಯಿತು. ಈ ಸಂದರ್ಭದಲ್ಲಿ ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿ, ನಾಗರಿಕರ ಆಸ್ತಿಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಕೆರೆಗಳು ಕೋಡಿ ಹರಿದು ಬೃಹತ್‌ ಪ್ರಮಾಣದಲ್ಲಿ ನೀರು ಹರಿಯಿತು. ಇದನ್ನು ನಿಯಂತ್ರಿಸಲು ಹಾಗೂ ನೀರಿನ ಹರಿವಿನ ಗತಿಯನ್ನು ಕಡಿಮೆ ಮಾಡಲು ಸರ್ಕಾರದ ಆದೇಶದಂತೆ (ನಅಇ 782 ಎಂಎನ್‌ವೈ 2022 (ಇ) ಬಿಬಿಎಂಪಿ ತೂಬುಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ, ವಲಯವಾರು ಎಂಟು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿದ್ದು, ಇದೀಗ ಅಂತಿಮ ಹಂತದಲ್ಲಿದೆ.

ADVERTISEMENT

ಸರ್ಕಾರದಿಂದ 2022ರ ಸೆ.28ರಂದು ವಿಷಯ ಸಂಖ್ಯೆ 2ರಂತೆ ಅನುಮೋದನೆಯಾಗಿರುವ ಕೆರೆಗಳು 148. ಯಾವ ವಲಯದಲ್ಲಿ ಎಷ್ಟು ಕೆರೆಗಳಿಗೆ ಎಷ್ಟು ವೆಚ್ಚ ಎಂಬುದನ್ನೂ ನಮೂದಿಸಲಾಗಿದೆ. ಆದರೆ, ಟೆಂಡರ್‌ ಪ್ಯಾಕೇಜ್‌ನಲ್ಲಿ 46 ಕೆರೆಗಳನ್ನು ಕೈಬಿಡಲಾಗಿದೆ. ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿರುವ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸಂಪೂರ್ಣ ಮಾಹಿತಿ ಇಲ್ಲ. ಅಧಿಕಾರ ವಿಕೇಂದ್ರೀಕರಣದಿಂದ ವಲಯವಾರು ಇರುವ ಕಾರ್ಯಪಾಲಕ ಎಂಜಿನಿಯರ್‌ಗಳೇ ಟೆಂಡರ್‌ಗಳನ್ನು
ಕರೆಯುತ್ತಿದ್ದಾರೆ.

ಶಾಸಕರಿಂದ ಹೆಚ್ಚಿನ ವೆಚ್ಚ!: ‘ಶಾಸಕರ ಆಣತಿ ಮೇರೆಗೆ ಮಾತ್ರ ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಸ್ಥಳೀಯ ಎಂಜಿನಿಯರ್‌ಗಳು ಕೈಗೊಳ್ಳುತ್ತಿದ್ದಾರೆ. ಸರ್ಕಾರದಿಂದ ಅಭಿವೃದ್ಧಿಗೆ ಕಾಮಗಾರಿ ಅನುಮೋದನೆಯಾಗಿದ್ದರೂ ಕೆಲವು ಕೆರೆಗಳ ಅಭಿವೃದ್ಧಿ ಆರಂಭವಾಗಿಯೇ ಇಲ್ಲ. ಉದಾಹರಣೆಗೆ ಕೆಂಚೇನಹಳ್ಳಿ ಕೆರೆ ಹಾಗೂ ಕೆಂಗೇರಿಯಲ್ಲಿರುವ ಗಾಂಧಿನಗರ ಕೆರೆ. ಅದೇ ರೀತಿ ತೂಬು ಅಳವಡಿಕೆಯಲ್ಲೂ ಕೆಲವೇ ಕೆರೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡಲಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತರಾದ ಟಿ.ಇ. ಶ್ರೀನಿವಾಸ್‌, ಮಲ್ಲಿಕಾರ್ಜುನಸ್ವಾಮಿ, ಟಿ. ಮೋಹನ್‌ ದೂರಿದರು.

ಕೂಡಲೇ ಕಾಮಗಾರಿ..: ರಾಜ್ಯ ಸರ್ಕಾರದ ನಿರ್ದೇಶನದಂತೆ ಕೆರೆಗಳಲ್ಲಿ ತೂಬು ಅಳವಡಿಸಲು ಆಯಾ ವಲಯವಾರು ವಿಭಾಗದಿಂದಲೇ ಟೆಂಡರ್‌ ಕರೆಯಲಾಗಿದೆ. ಮಳೆಗಾಲದ ವೇಳೆಗೆ ಈ ಕೆಲಸ ಮುಗಿಸಬೇಕು ಎಂಬ ಉದ್ದೇಶವಿದೆ. ಹೀಗಾಗಿ ಪ್ಯಾಕೇಜ್‌ ಟೆಂಡರ್‌ ಕರೆಯಲಾಗಿದೆ ಎಂದು ಬಿಬಿಎಂಪಿ ಕೆರೆಗಳ ವಿಭಾಗ ಮುಖ್ಯ ಎಂಜಿನಿಯರ್‌ ವಿಜಯಕುಮಾರ ಹರಿದಾಸ್‌ ಹೇಳಿದರು.

ಅನುಮೋದನೆ, ಟೆಂಡರ್‌ನಲ್ಲಿ ವ್ಯತ್ಯಾಸ

ಕಾಮಗಾರಿಗೆ ವಲಯವಾರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗಿದೆ. ಆಯಾ ವಲಯದಲ್ಲಿರುವ ಎಲ್ಲ ಕೆರೆಗಳಿಗೆ ತೂಬು ಅಳವಡಿಸುವ ಕಾಮಗಾರಿ ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ. ಆದರೆ, ಬಿಬಿಎಂಪಿಯ ಕಡತದಲ್ಲಿರುವ ಮಾಹಿತಿ ವಿಭಿನ್ನವಾಗಿದೆ. ಪ್ರತಿಯೊಂದು ವಲಯದಲ್ಲಿ ಯಾವ ಕೆರೆಗಳಿಗೆ ತೂಬು ಅಳವಡಿಸಬೇಕು, ಎಷ್ಟು ವೆಚ್ಚ ಎಂಬ ಮಾಹಿತಿ ಇದ್ದು, ಇದರಲ್ಲಿರುವುದು 102 ಕೆರೆಗಳಷ್ಟೇ. ಅಷ್ಟಕ್ಕೇ ಸರ್ಕಾರ ಅನುಮೋದನೆ ನೀಡಿರುವ ₹38.85 ಕೋಟಿ ವೆಚ್ಚವಾಗುತ್ತದೆ. ಉಳಿದ 46 ಕೆರೆಗಳ ಮಾಹಿತಿ ಕಡತದಲ್ಲಿ ಇಲ್ಲ.

ಪಶ್ಚಿಮ ಹಾಗೂ ದಾಸರಹಳ್ಳಿ ವಲಯದಲ್ಲಿ ಕ್ರಮವಾಗಿ 2 ಮತ್ತು 5 ಕೆರೆಗಳಿಗೆ ತೂಬು ಅಳವಡಿಸುವ ಬಗ್ಗೆ ಅನುಮೋದನೆ, ಕಡತದ ಮಾಹಿತಿ ಸರಿಯಾಗಿದೆ. ಪೂರ್ವ ವಲಯದಲ್ಲಿ ಅನುಮೋದನೆಯಾಗಿರುವುದು 4 ಕೆರೆ, ಪಟ್ಟಿಯಲ್ಲಿರುವುದು 3, ದಕ್ಷಿಣದಲ್ಲಿ 7ಕ್ಕೆ 5, ಬೊಮ್ಮನಹಳ್ಳಿಯಲ್ಲಿ 38ಕ್ಕೆ 25, ಮಹದೇವಪುರದಲ್ಲಿ 52ಕ್ಕೆ 40, ರಾಜರಾಜೇಶ್ವರಿನಗರದಲ್ಲಿ 30ಕ್ಕೆ 23, ಯಲಹಂಕದಲ್ಲಿ 22ಕ್ಕೆ 14 ಕೆರೆಗಳಿಗೆ ಮಾತ್ರ ತೂಬು ಅಳವಡಿಸಲಾಗುತ್ತಿದೆ.

ಇತರೆ ವೆಚ್ಚ ₹8 ಕೋಟಿ!

102 ಕೆರೆಗಳಲ್ಲಿ ಅಳವಡಿಸಲಾಗುತ್ತಿರುವ ತೂಬುಗಳ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ, ಯೋಜನಾ ನಿರ್ವಹಣೆ ಸಲಹೆ (‍ಪಿಎಂಸಿಗೆ) ಮತ್ತು ಇತರೆ ವೆಚ್ಚವಾಗಿ ಬಿಬಿಎಂಪಿ ₹8.22 ಕೋಟಿ ವೆಚ್ಚ ಮಾಡುತ್ತಿದೆ. ಸಾಮಾನ್ಯವಾಗಿ ಪಿಎಂಸಿಗೆ ಯೋಜನೆ ಶೇ 10ರಷ್ಟನ್ನು ನೀಡಲಾಗುತ್ತದೆ. ಅಂದರೆ ₹3.6 ಕೋಟಿಯಾಗುತ್ತದೆ. ಇನ್ನುಳಿದ ನಾಲ್ಕೂವರೆ ಕೋಟಿಗೂ ಹೆಚ್ಚು ಇತರೆ ವೆಚ್ಚವಾಗಿದೆ.

ತೂಬು: ಯಾವ ಕೆರೆಗೆ ಎಷ್ಟು?

ವಲಯ;ಕೆರೆಗಳು;ವೆಚ್ಚ (₹ ಕೋಟಿಗಳಲ್ಲಿ)

ಪೂರ್ವ;3;2

ಪಶ್ಚಿಮ;2;1

ದಕ್ಷಿಣ;5;3.5

ಬೊಮ್ಮನಹಳ್ಳಿ;25;8

ದಾಸರಹಳ್ಳಿ;5;1.25

ಮಹದೇವಪುರ;25;9

ರಾಜರಾಜೇಶ್ವರಿ;23;7.10

ಯಲಹಂಕ;14;5

ಒಟ್ಟು;102;36.85

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.