ADVERTISEMENT

ವೈದ್ಯ ಸಿಬ್ಬಂದಿ ಸುರಕ್ಷಿತವಾಗಿಡುವ ಕಿಯೋಸ್ಕ್‌ಗೆ ಚಾಲನೆ

ರಾಜ್ಯಕ್ಕೆ ವಿಪ್ರೊ ಜಿಇ ಹೆಲ್ತ್‌ಕೇರ್‌ ಕೊಡುಗೆ–15 ಕಡೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:27 IST
Last Updated 27 ಮೇ 2020, 19:27 IST
ವಿಪ್ರೊ ಜಿಇ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿರುವ ಕೋವಿಡ್ ‌ಕಿಯೋಸ್ಕ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್. ಅಶ್ವತ್ಥನಾರಾಯಣ ಇದ್ದರು
ವಿಪ್ರೊ ಜಿಇ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿರುವ ಕೋವಿಡ್ ‌ಕಿಯೋಸ್ಕ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್. ಅಶ್ವತ್ಥನಾರಾಯಣ ಇದ್ದರು   

ಬೆಂಗಳೂರು: ‘ವಿಪ್ರೊ ಜಿಇ ಹೆಲ್ತ್‌ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿದ ಸಂಚಾರಿ ಕೋವಿಡ್ ಸ್ಮಾರ್ಟ್ ಕಿಯೋಸ್ಕ್‌ಗಳನ್ನು ರಾಜ್ಯದ 15 ಕಡೆಗಳಲ್ಲಿ ಇರಿಸಲಾಗುವುದು’‌ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಬುಧವಾರ ಕಿಯೋಸ್ಕ್ ಉದ್ಘಾಟಿಸಿದ ಅವರು, ’ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿಯೇ ಕೋವಿಡ್ ನಿಯಂತ್ರಣದಲ್ಲಿ ರಾಜ್ಯವು ದೇಶದಲ್ಲೇ ಗಮನ ಸೆಳೆದಿದೆ. ರಾಜ್ಯದಲ್ಲಿ ಇಂದು 60 ಕೋವಿಡ್‌ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಇದು ಸಹ ದೊಡ್ಡ ಸಾಧನೆಯಾಗಿದೆ‘ ಎಂದರು.

‘ಕೋವಿಡ್‌ ಸೋಂಕು ಪತ್ತೆ ಪರೀಕ್ಷೆ ವೇಳೆ ನೇರ ಸಂಪರ್ಕ ಇಲ್ಲದೆ ಮಾದರಿ ಸಂಗ್ರಹಿಸುವ ಸ್ಮಾರ್ಟ್‌ ಕಿಯೋಸ್ಕ್‌ ವ್ಯವಸ್ಥೆ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ , ‘ಸುರಕ್ಷತೆ, ಸ್ವಚ್ಛತೆಯ ಕಾಯ್ದುಕೊಳ್ಳುವ ಜತೆಗೆ ಸುಲಭವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್‌ ಅನ್ನು ಎಲ್ಲಿಗೆ ಬೇಕಾದಾರೂ ಒಯ್ಯಬಹುದು. ಜಿಲ್ಲಾ ಆಸ್ಪತ್ರೆಗಳಿಗೂ ಈ ಕಿಯೋಸ್ಕ್‌ಗಳನ್ನು ತಲುಪಿಸಬಹುದು’ ಎಂದರು.

‘ಇಲ್ಲಿ ಪರಸ್ಪರ ಸಂಪರ್ಕಕ್ಕೆ ಬರದೆ ಪರೀಕ್ಷೆ ನಡೆಸಲು ಸಾಧ್ಯವಾಗುವುದರಿಂದ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆತಂಕ ಕಡಿಮೆ ಆಗಲಿದೆ, ಪಿಪಿಇ ಕಿಟ್‌ಗಳ ಬಳಕೆಯೂ ಕಡಿಮೆ ಆಗಲಿದೆ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಿಪ್ರೊ ಜಿಇ ವ್ಯವಸ್ಥಾಪಕ ನಿರ್ದೇಶಕ ನಳಿನಿ ಕಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.