ADVERTISEMENT

ನಾಡು ಕಟ್ಟಲು ಸಾಧಕರ ಅನುಭವದ ನೆರವು: ಸಿ.ಎಂ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 20:47 IST
Last Updated 1 ನವೆಂಬರ್ 2022, 20:47 IST
   

ಬೆಂಗಳೂರು:‘ಇದುವರೆಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದವರ ಸಾಧಕರ ಕುರಿತು ಕೃತಿ ರಚಿಸಬೇಕು. ಅವರ ಅನುಭವ ಮತ್ತು ನಾಡು ಕಟ್ಟುವ ಬಗೆ ಕೃತಿಯಲ್ಲಿ ಇರಬೇಕು. ಎಲ್ಲರೂ ಸೇರಿ ನಾಡು ಕಟ್ಟೋಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ಮೊದಲು ಮಾತನಾಡಿದ ಅವರು,‘ವಯಸ್ಸಿಗೂ ಸಾಧನೆಗೂ ಸಂಬಂಧ ಇಲ್ಲ. ಯಾವ ವಯಸ್ಸಿನಲ್ಲಿ ಬೇಕಾದರೂ ಸಾಧನೆ ಸಾಧ್ಯವಿದೆ. ಸಾಧಕರು ಸಣ್ಣ ವಯಸ್ಸಿನಲ್ಲೇ ಬಿಟ್ಟು ಹೋಗುತ್ತಿದ್ದಾರೆ. ದಿವಂಗತ ಪುನೀತ್ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ್ದವರು. ಅವರ ಮುಗ್ಧತೆ, ಸೇವಾ ಮನೋಭಾವಕ್ಕೆ ಇದೇ ಸಾಕ್ಷಿ’ ಎಂದು ನುಡಿದರು.

‘ದುಡ್ಡು ಕೊಟ್ಟು ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಶಾಲೆಯಷ್ಟೇ ಸ್ಥಳದಲ್ಲಿ ವಿಶ್ವವಿದ್ಯಾಲಯಗಳು ತಲೆಯೆತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‌ಸಚಿವ ವಿ.ಸುನಿಲ್‌ಕುಮಾರ್ ಮಾತನಾಡಿ, ‘ಇಸ್ರೋ ಮಾಜಿ ನಿರ್ದೇಶಕ ಕೆ.ಶಿವನ್ ಅವರಿಂದ ಹಿಡಿದು ಪೌರಕಾರ್ಮಿಕ ಮಹಿಳೆಯವರೆಗಿನ ಸಾಧಕರನ್ನು ಗುರುತಿಸಲಾಗಿದೆ. ದೈವ ನರ್ತಕರನ್ನೂ ಗುರುತಿಸಲಾಗಿದೆ. ಸಮಿತಿಯೇ ಸಾಧಕರ ಹುಡುಕಿ ಪ್ರಶಸ್ತಿ ನೀಡಿದೆ. ಇದು ಸಮತೋಲನವಾದ ಪಟ್ಟಿ’ ಎಂದು
ಹೇಳಿದರು.

ಇಲಾಖೆ‌ ಕಾರ್ಯದರ್ಶಿ ಡಾ.ಎನ್.ಮಂಜುಳಾ ಮಾತನಾಡಿ, ‘15 ಸಾವಿರ ಕಲಾವಿದರಿಗೆ ಪಿಂಚಣಿ ವಿತರಿಸಲಾಗುತ್ತಿದೆ. ಕಲಾವಿದರ ಪಿಂಚಣಿಯನ್ನು ₹ 1,500ರಿಂದ ₹ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. 16 ಸಾವಿರ ಕಲಾವಿದರ ದತ್ತಾಂಶ ಸಂಗ್ರಹಿಸುವ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

ಸಚಿವ ಆರ್.ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ವಿಧಾ‌ನ ಪರಿಷತ್ ಸದಸ್ಯ ಟಿ.ಎ. ಶರವಣ ಹಾಜರಿದ್ದರು.

₹ 5 ಲಕ್ಷ ನಗದು: ಇಸ್ರೊ ಮಾಜಿ ನಿರ್ದೇಶಕ ಕೆ. ಶಿವನ್‌, ಹೂವಿನಹಡಗಲಿಯ ಪೌರಕಾರ್ಮಿಕ ಮಹಿಳೆ ಮಲ್ಲಮ್ಮ, ಸಾಹಿತಿಗಳಾದ ಪ್ರೊ.ಅ.ರಾ. ಮಿತ್ರ, ಪ್ರೊ.ಕೃಷ್ಣೇಗೌಡ, ಸೋಲಿಗರ ಮಾದಮ್ಮ, ಕಲಾವಿದ ಮಹೇಶ್ವರ ಗೌಡ ಲಿಂಗದಹಳ್ಳಿ ಸೇರಿದಂತೆ 67 ಮಂದಿಗೆ ತಲಾ ₹ 5 ಲಕ್ಷ ನಗದು, 25 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಹಿಂದಿನ ವರ್ಷದವರೆಗೂ ₹ 1 ಲಕ್ಷ ನಗದು ನೀಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.