ADVERTISEMENT

ಬೆಂಗಳೂರು: ಅತ್ತೆ ಮನೆಯಲ್ಲಿ ₹3.8 ಲಕ್ಷ ಮೌಲ್ಯದ ಚಿನ್ನ ಕದ್ದ ಅಳಿಯನ ಸೆರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 15:07 IST
Last Updated 12 ಜುಲೈ 2024, 15:07 IST
 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಅತ್ತೆಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ರಾಜಗೋಪಾಲನಗರ ಠಾಣೆ ಪೊಲೀಸರು, ₹ 3.8 ಲಕ್ಷ ಮೌಲ್ಯದ 70 ಗ್ರಾಂ. ತೂಕದ ಚಿನ್ನ ವಶಪಡಿಸಿಕೊಂಡಿದ್ದಾರೆ.

ಕಮಲನಗರದ ನಿವಾಸಿ ಪರಶುರಾಮ (29) ಬಂಧಿತ ಆರೋಪಿ. ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ವಾಸವಿದ್ದ ನಾಗಮ್ಮ ಅವರು ತಮ್ಮ ಮಗಳನ್ನು ಪರಶುರಾಮನಿಗೆ ಕೊಟ್ಟು ಮದುವೆ ಮಾಡಿದ್ದರು. ಈತ ಕೆಲಸವಿಲ್ಲದೆ ಓಡಾಡಿಕೊಂಡಿದ್ದ. ಜುಲೈ 6 ರಂದು ನಾಗಮ್ಮ ಮತ್ತು ಮಗಳು ದೇವಸ್ಥಾನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಆರೋಪಿಯು ಮನೆಯ ಕೊಠಡಿಯಲ್ಲಿದ್ದ ಬೀರುವಿನಿಂದ 70 ಗ್ರಾಂ. ತೂಕದ ಆಭರಣ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

ಲಗ್ಗೆರೆ ಮುಖ್ಯರಸ್ತೆಯ ಏಟ್ರಿಯಾ ಹೋಟೆಲ್‌ ಬಳಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಬಳಿಕ ಆತ ವಾಸವಿದ್ದ ಮನೆಯಲ್ಲಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.

ADVERTISEMENT

ಇಬ್ಬರ ಬಂಧನ: ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹ 80 ಸಾವಿರ ಮೌಲ್ಯದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಮಾರ್ಟ್‌ ಮುಂಭಾಗದ ಬೈಕ್‌ ಸರ್ವಿಸ್‌ ಶಾಪ್‌ನಲ್ಲಿ ವಾಹನಗಳ ಮಾಲೀಕರು ಸರ್ವಿಸ್‌ಗಾಗಿ ಬಿಟ್ಟು ಹೋಗಿದ್ದರು. ಸರ್ವಿಸ್ ಆದ ಬಳಿಕ ಶಾಪ್‌ ಮಾಲೀಕ, ಅಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಕಳ್ಳತನವಾಗಿದ್ದವು. ಖಚಿತ ಮಾಹಿತಿ ಮೇರೆಗೆ ಹುಣಸಮಾರನಹಳ್ಳಿ ಬಸ್‌ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.