ADVERTISEMENT

ಕನ್ನಡಾಭಿಮಾನಕ್ಕೆ ಪಹಲ್ಗಾಮ್ ಘಟನೆ ಹೋಲಿಕೆ ಪ್ರಕರಣ: ಸೋನು ನಿಗಮ್ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:05 IST
Last Updated 3 ಮೇ 2025, 16:05 IST
<div class="paragraphs"><p>ಸೋನು ನಿಗಮ್</p></div>

ಸೋನು ನಿಗಮ್

   

ಬೆಂಗಳೂರು: ಅಭಿಮಾನಿಯೊಬ್ಬರ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ಹೋಲಿಕೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್‌ ಗಾಯಕ ಸೋನು ನಿಗಮ್‌ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನಗರ ಜಿಲ್ಲಾ ಘಟಕದ ಅಧ್ಯಕ್ಷ
ಟಿ.ಎ.ಧರ್ಮರಾಜ ಅವರ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 351(2)(ಕ್ರಿಮಿನಲ್ ಬೆದರಿಕೆ), 353 (ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವ ಹೇಳಿಕೆಗಳು), 352(1)(ಉದ್ದೇಶಪೂರ್ವಕವಾಗಿ ಅವಮಾನ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .

ADVERTISEMENT

‘ಸೋನು ನಿಗಮ್ ಅವರು ಈಸ್ಟ್‌ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್‌ ಆ್ಯಂಡ್ ಟೆಕ್ನಾಲಜಿಯಲ್ಲಿ ಏಪ್ರಿಲ್ 25 ಮತ್ತು 26 ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಭಾವನೆಗಳನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಅವರು ಹೇಳಿಕೆಗಳು ವಿಡಿಯೊದಲ್ಲಿ ದಾಖಲಾಗಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಕನ್ನಡಗರಿಗೆ ಅವಮಾನ ಮಾಡಿದ್ದಾರೆ.  ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಧರ್ಮರಾಜ ಒತ್ತಾಯಿಸಿದ್ದರು.

ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಕುರಿತು ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯುವಕನೊಬ್ಬ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳಕು ಹಾಕಿ ಗಾಯಕ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

‘ಬೇಡಿಕೆಯಿಡಲಿಲ್ಲ, ಬೆದರಿಸಿದರು’

‘ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹೇಳುವಂತೆ ನನಗೆ ಒತ್ತಾಯಿಸಿದ್ದಲ್ಲ. ಅವರ ವರ್ತನೆಯು ಬೆದರಿಸುವ ರೀತಿಯಲ್ಲಿತ್ತು’ ಎಂದು ಗಾಯಕ ಸೋನು ನಿಗಮ್ ಹೇಳಿದ್ದಾರೆ.

ವಿವಾದದ ಬಗ್ಗೆ ಶನಿವಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಪೋಸ್ಟ್‌ ಮಾಡಿರುವ ಅವರು, ‘ಕನ್ನಡ... ಕನ್ನಡ... ಎಂದು ಕೂಗುತ್ತಿದ್ದ ಆ ನಾಲ್ಕೈದು ಮಂದಿ ಗೂಂಡಾಗಳಂತಿದ್ದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ ಎಂದು ಹಲವರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಪಹಲ್ಗಾಮ್‌ ದಾಳಿಯ ಸಮಯದಲ್ಲಿ ಉಗ್ರರು ಅಲ್ಲಿದ್ದ ಜನರ ಭಾಷೆ ಕೇಳಲಿಲ್ಲ ಎಂಬುದನ್ನು ನಾಲ್ಕೈದು ಮಂದಿಗೆ ನೆನಪಿಸಬೇಕಾಗಿತ್ತು, ಕನ್ನಡಿಗರು ತುಂಬಾ ಒಳ್ಳೆಯ ಜನರು’ ಎಂದಿದ್ದಾರೆ.

‘ಕನ್ನಡ ಹಾಡು ಹೇಳುವಂತೆ ಅವರು ಬೇಡಿಕೆಯಿಡಲಿಲ್ಲ, ಬದಲು ಬೆದರಿಕೆ ಹಾಕಿದ್ದಾರೆ. ಆ ರೀತಿ ಬೆದರಿಕೆ ಹಾಕಲು ಅವಕಾಶ ನೀಡುವುದಿಲ್ಲ ಎಂದು ಅವರಿಗೆ ಗೊತ್ತುಪಡಿಸುವುದು ಮುಖ್ಯವಾಗಿದೆ. ಪ್ರೀತಿಯ ಭೂಮಿಯಲ್ಲಿ ದ್ವೇಷದ ಬೀಜಗಳನ್ನು ಬಿತ್ತುವ ಜನರು ನಿಮ್ಮ ಸುತ್ತಮುತ್ತ ಇರಬಾರದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.