ADVERTISEMENT

ಬೆಂಗಳೂರಲ್ಲಿ ಅಡುಗೆ ಎಣ್ಣೆಗೆ ಎಂಜಲು ಉಗಿದು ಪಾಪ್‌ಕಾರ್ನ್ ತಯಾರಿ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 11:26 IST
Last Updated 15 ಜೂನ್ 2022, 11:26 IST
   

ಬೆಂಗಳೂರು: ಅಡುಗೆ ಎಣ್ಣೆಗೆ ಎಂಜಲು ಉಗಿದು ಅದರಲ್ಲೇ ಪಾಪ್‌ಕಾರ್ನ್‌ ತಯಾರಿಸಿ ಮಾರುತ್ತಿದ್ದ ಆರೋಪದಡಿ ನಯಾಜ್ ಪಾಷಾ (21) ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

‘ಜಯನಗರ ಒಂದನೇ ಹಂತದ ಸೋಮೇಶ್ವರನಗರ ನಿವಾಸಿ ನಯಾಜ್, ಲಾಲ್‌ಬಾಗ್ ಉದ್ಯಾನದಲ್ಲಿ ಗಾಜಿನ ಮನೆ ಹಿಂಭಾಗದಲ್ಲಿ ಪಾಪ್‌ಕಾರ್ನ್ ಮಳಿಗೆ ಇಟ್ಟುಕೊಂಡಿದ್ದ. ಸಾರ್ವಜನಿಕರ ಹೇಳಿಕೆ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಜೂನ್ 11ರಂದು ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಿತ್ಯವೂ ಉದ್ಯಾನಕ್ಕೆ ಬರುತ್ತಿದ್ದ ಆರೋಪಿ, ತಾತ್ಕಾಲಿಕ ಮಳಿಗೆಯಲ್ಲಿ ಪಾಪ್‌ಕಾರ್ನ್‌ ಮಾರುತ್ತಿದ್ದ. ಉದ್ಯಾನಕ್ಕೆ ಬರುವ ಸಾರ್ವಜನಿಕರು, ಮಕ್ಕಳು ಹಾಗೂ ವೃದ್ಧರು ಈತನ ಬಳಿ ಪಾಪ್‌ಕಾರ್ನ್ ಖರೀದಿಸಿ ತಿನ್ನುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

ಎಂಜಲು ಉಗಿದು ಕರಿಯುತ್ತಿದ್ದ: ‘ಬಾಣಲಿಯಲ್ಲಿ ಎಣ್ಣೆ ಹಾಕುತ್ತಿದ್ದ ಆರೋಪಿ, ಮೂರು–ನಾಲ್ಕು ಬಾರಿ ಎಂಜಲು ಉಗಿಯುತ್ತಿದ್ದ. ನಂತರ, ಸ್ವಲ್ಪ ಬಿಸಿ ಮಾಡಿ ಪಾಪ್‌ಕಾರ್ನ್‌ಗಳನ್ನು ಕರಿಯುತ್ತಿದ್ದ. ಅವುಗಳನ್ನೇ ಸಾರ್ವಜನಿಕರಿಗೆ ಮಾರುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕೋವಿಡ್ ಹರಡುವಿಕೆ ಭೀತಿ ಇಂದಿಗೂ ಇದೆ. ಸಾರ್ವಜನಿಕರಿಗೆ ಸೋಂಕು ಹರಡಿಸುವ ಉದ್ದೇಶದಿಂದಲೇ ಆರೋಪಿಯು ಎಣ್ಣೆಯಲ್ಲಿ ತನ್ನ ಎಂಜಲು ಉಗಿದು ಆಹಾರ ತಯಾರಿಸುತ್ತಿದ್ದ. ಇದರಿಂದ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಉದ್ದೇಶ ಆರೋಪಿಯದ್ದು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.

‘ಠಾಣೆ ಸಿಬ್ಬಂದಿ ಜೂನ್ 11ರಂದು ಬೆಳಿಗ್ಗೆ ಉದ್ಯಾನದಲ್ಲಿ ಗಸ್ತು ತಿರುಗುತ್ತಿದ್ದರು. ಪಾಪ್‌ಕಾರ್ನ್ ಮಳಿಗೆ ಬಳಿ ಸೇರಿದ್ದ ಜನ, ಆರೋಪಿ ನಯಾಜ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ವಿಚಾರಿಸಿದ್ದರು. ‘ಎಣ್ಣೆಯಲ್ಲಿ ಎಂಜಲು ಉಗಿದು, ಅದರಲ್ಲೇ ಆಹಾರ ತಯಾರಿಸಿಕೊಡುತ್ತಿದ್ದಾನೆ’ ಎಂಬುದಾಗಿ ಸಾರ್ವಜನಿಕರು ದೂರಿದ್ದರು. ನಂತರವೇ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.