
ರಾಜರಾಜೇಶ್ವರಿನಗರ: ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಸಭೆಯಲ್ಲಿ ಕಾಣಿಸಿಕೊಂಡರು.
ಮಾಗಡಿ ಮುಖ್ಯರಸ್ತೆಯ ಬಿಇಎಲ್ ಬಡಾವಣೆಯಲ್ಲಿ ಶುಕ್ರವಾರ ನಡೆದ ಯಶವಂತಪುರ ವಿಧಾನಸಭಾ ಕ್ಷೇತ್ರದ ಬೂತ್‌ಮಟ್ಟದ ಏಜೆಂಟ್ -2 ನೇಮಕಾತಿ ಸಭೆಯಲ್ಲಿ ಅವರು ಭಾಗಿ ಆಗಿದ್ದರು.
‘ಪಕ್ಷ ನಿಷ್ಠೆ, ಸಂಘಟನೆ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಯಾರು ಮಾಡುತ್ತಾರೊ ಅವರು ಸಮಾಜ ಸೇವಕರ ಸಾಲಿನಲ್ಲಿ ನಿಲ್ಲುತ್ತಾರೆ. ನಾಯಕತ್ವ, ಅಧಿಕಾರ, ಹುಡುಕಿಕೊಂಡು ಬರುತ್ತದೆ’ ಎಂದು ಸೋಮಶೇಖರ್ ಹೇಳಿದರು.
‘ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾದಾಗ ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತವೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು‘ ಎಂದು ಕಿವಿಮಾತು ಹೇಳಿದರು.
‘ಬೂತ್‌ಮಟ್ಟದಲ್ಲಿ ಮತದಾರರ ಪಟ್ಟಿಗೆ 18 ವರ್ಷ ತುಂಬಿದವರನ್ನು ಸೇರಿಸುವುದು, ಎರಡು ಕಡೆ ಹೆಸರು ಇದ್ದರೆ ತೆಗೆಸುವುದು, ಬೂತ್ ವ್ಯಾಪ್ತಿಯಲ್ಲಿ ವಾಸಿಸುವವರನ್ನು ಪಟ್ಟಿಗೆ ಸೇರಿಸುವ, ಮೃತರ ಹೆಸರನ್ನು ತೆಗೆಸುವ ಕೆಲಸವನ್ನು ಸದಸ್ಯರು ಮಾಡಬೇಕು’ ಎಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಾಲರಾಜ್, ಕೆಪಿಸಿಸಿ ಜಾಲತಾಣದ ಮುಖ್ಯಸ್ಥ ವಿಜಯ ಮತ್ತಿಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣಸಿದ್ದಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.