ADVERTISEMENT

ಕಾಲ್ತುಳಿತ ಪ್ರಕರಣ: ನೋಟಿಸ್ ಜಾರಿಗೆ ಸಿಐಡಿ ಸಿದ್ಧತೆ

ಮ್ಯಾಜಿಸ್ಟೀರಿಯಲ್‌ ತನಿಖೆ: ಹೇಳಿಕೆ ದಾಖಲಿಸಲು ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 23:30 IST
Last Updated 9 ಜೂನ್ 2025, 23:30 IST
<div class="paragraphs"><p>ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ</p></div>

ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ

   

ಪಿಟಿಐ

ಬೆಂಗಳೂರು: ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡವು ವಿಜಯೋತ್ಸವದ ಆಯೋಜಕರಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದೆ. 

ADVERTISEMENT

ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ವಿರುದ್ಧ ಕಬ್ಬನ್‌ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಿಐಡಿ ಎಸ್‌ಪಿ ಶುಭನ್ವಿತಾ ಅವರ ನೇತೃತ್ವದ ತಂಡವು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಪ್ರಕರಣದ ಸಂಬಂಧ ಆರ್‌ಸಿಬಿ, ಕೆಎಸ್‍ಸಿಎ ಮತ್ತು ಡಿಎನ್‍ಎ ಪದಾಧಿಕಾರಿಗಳಿಗೆ ಶೀಘ್ರದಲ್ಲಿಯೇ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳಾದ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧತೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ತನಿಖೆಯೂ ನಡೆಯುತ್ತಿದ್ದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಜೂನ್ 11, 13 ಮತ್ತು 17ರಂದು ಸಂತ್ರಸ್ತ್ರರು ಹಾಗೂ ಅವರ ಕುಟುಂಬ ಸದಸ್ಯರಿಂದ ಹೇಳಿಕೆ ದಾಖಲಿಸಿಕೊಳ್ಳಲು ದಿನಾಂಕ ನಿಗದಿ ಪಡಿಸಲಾಗಿದೆ.

ಜಗದೀಶ್ ಅವರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು. ಕಾಲ್ತುಳಿತ ಸಂಭವಿಸಿದ ಜಾಗಗಳನ್ನು ಪರಿಶೀಲನೆ ನಡೆಸಿದ್ದರು.  

‘ವಿಜಯೋತ್ಸವ ಆಯೋಜನೆ ಸಂದರ್ಭದಲ್ಲಿ ಆಂಬುಲೆನ್ಸ್ ಇರಲಿಲ್ಲ. ಪ್ರಥಮ ಚಿಕಿತ್ಸೆಗೂ ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳದಲ್ಲಿ ಇರಲಿಲ್ಲ ಎಂದು ಗಾಯಾಳುಗಳು ಹಾಗೂ ಮೃತಪಟ್ಟವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. 11 ಮಂದಿಯ ಕುಟುಂಬದ ಸದಸ್ಯರಿಂದ ಹೇಳಿಕೆ ದಾಖಲಿಸಲು ಪ್ರತಿ  ಕುಟುಂಬಕ್ಕೆ ಪ್ರತ್ಯೇಕ ಸಮಯ ನಿಗದಿ ಪಡಿಸಲಾಗಿದೆ. ಸಂಬಂಧಿಸಿದವರಿಗೆ ಮಾಹಿತಿಯನ್ನೂ ನೀಡಲಾಗಿದೆ’ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.