ADVERTISEMENT

ಬಂದ್ ಆಗಿದ್ದು ಕ್ಲಬ್, ಪಬ್ ಅಷ್ಟೇ: ಆಕ್ರೋಶ

ಅಬಕಾರಿ ಇಲಾಖೆಯ ಆದೇಶಕ್ಕೆ ಪಬ್‌ ಮಾಲೀಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:38 IST
Last Updated 14 ಮಾರ್ಚ್ 2020, 22:38 IST
ಶ್ರೀನಗರ ಮುಖ್ಯ ರಸ್ತೆಯಲ್ಲಿ ಶನಿವಾರ ತೆರೆದಿದ್ದ ಮದ್ಯದ ಅಂಗಡಿ
ಶ್ರೀನಗರ ಮುಖ್ಯ ರಸ್ತೆಯಲ್ಲಿ ಶನಿವಾರ ತೆರೆದಿದ್ದ ಮದ್ಯದ ಅಂಗಡಿ   

ಬೆಂಗಳೂರು: ಕೊರೊನಾ ಸೋಂಕು ಹರಡವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಅಬಕಾರಿ ಇಲಾಖೆ ಕ್ಲಬ್ ಮತ್ತು ಪಬ್‌ಗಳನ್ನು ಬಂದ್ ಮಾಡಿಸಿದೆ. ರಾಜ್ಯದಲ್ಲಿ ಒಟ್ಟು 11,037 ಮದ್ಯದ ಅಂಗಡಿಗಳ ಪೈಕಿ 308 ಮದ್ಯ ಪೂರೈಕೆ ಕೇಂದ್ರಗಳು ಮಾತ್ರ ಬಾಗಿಲು ಮುಚ್ಚಿವೆ.

ಅಬಕಾರಿ ಇಲಾಖೆ ಆದೇಶದ ಪ್ರಕಾರ ಕ್ಲಬ್‌ಗಳು (ಸಿಎಲ್‌–4) ಮತ್ತು ಗ್ರಾಹಕರಿಗೆ ಬಿಯರ್‌ ಮಾತ್ರ ಪೂರೈಸುವ ಪಬ್‌ಗಳು (ಚಿಲ್ಲರೆ ಬಿಯರ್ ವ್ಯಾಪಾರ ಕೇಂದ್ರಗಳು) ಮಾ.21ರ ಮಧ್ಯರಾತ್ರಿ ತನಕ ಬಂದ್ ಆಗಲಿವೆ. ಒಟ್ಟು ಮದ್ಯದ ಅಂಗಡಿಗಳಿಗೆ ಹೋಲಿಸಿದರೆ ಈ
ಎರಡು ಬಗೆಯ ಮದ್ಯ ಪೂರೈಕೆ ಕೇಂದ್ರಗಳ ಸಂಖ್ಯೆ ತೀರಾ ಕಡಿಮೆ.

ಬಾರ್‌ ಆ್ಯಂಡ್ ರೆಸ್ಟೋರೆಂಟ್ (ಸಿಎಲ್–9), ವೈನ್ ಶಾಪ್‌ಗಳು (ಸಿಎಲ್‌–2), ಹೋಟೆಲ್‌ ಮತ್ತು ಬೋರ್ಡ್‌ ಹೌಸ್‌ (ಸಿಎಲ್‌ –7), ಎಂಎಸ್‌ಐಎಲ್‌ ಮದ್ಯದ ಮಳಿಗೆಗಳು (ಸಿಎಲ್‌–11ಸಿ) ಬಂದ್ ಆಗಿಲ್ಲ. ಬಂದ್ ಆಗದಿರುವ ಮದ್ಯ ಪೂರೈಕೆ ಕೇಂದ್ರಗಳ ಸಂಖ್ಯೆ 10,729.

ADVERTISEMENT

ಬೆಂಗಳೂರು ನಗರದಲ್ಲಿರುವ 3,338 ಮದ್ಯದಂಗಡಿ ಪರವಾನಗಿ ಪೈಕಿ 77 ಕ್ಲಬ್‌ಗಳು, 56 ಪಬ್‌ಗಳಿವೆ. ‘ಸಣ್ಣ ವೈನ್ ಶಾಪ್‌ನಿಂದ ಐಷಾರಾಮಿ ಹೋಟೆಲ್‌ಗಳಲ್ಲಿ ಮದ್ಯ ಪೂರೈಕೆ ನಿಲ್ಲಿಸದ ಸರ್ಕಾರ, ಕಡಿಮೆ ಸಂಖ್ಯೆಯಲ್ಲಿರುವ ಪಬ್ ಮತ್ತು ಕ್ಲಬ್‌ಗಳನ್ನು ಬಂದ್ ಮಾಡಿಸಿರುವುದು ಸರಿಯೇ’ ಎಂಬುದು ಪಬ್‌ ಮಾಲೀಕರ ಪ್ರಶ್ನೆ.

‘ಕೊರೊನಾ ಸೋಂಕು ಪಬ್ ಮತ್ತು ಕ್ಲಬ್‌ಗಳಲ್ಲಷ್ಟೇ ಹರಡುತ್ತದೆ ಎಂಬ ಕಲ್ಪನೆ ಅವೈಜ್ಞಾನಿಕ. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಬ್‌ಗಳಿಗಿಂತ ಹೆಚ್ಚಿನ ಜನ ಸೇರುತ್ತಾರೆ. ಅಲ್ಲಿ ಸೇರುವ ಜನರಿಂದ ಸೋಂಕು ಹರಡುವುದಿಲ್ಲವೇ’ ಎಂದು ಪಬ್ ಮಾಲೀಕರೊಬ್ಬರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.