ADVERTISEMENT

ಕೇಂದ್ರದ ಮಲತಾಯಿ ಧೋರಣೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ/ಬೆಂಗಳೂರು: ‘ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೆರೆ ಬಂದು 20 ದಿನ ಕಳೆದಿದ್ದರೂ ನಯಾಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಇದಕ್ಕೆ ಸಾಕ್ಷಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರದಿಂದ ಇನ್ನೊಂದು ತಂಡ ಬಂದು ‍ಅಧ್ಯಯನ ಮಾಡುವ ಅಗತ್ಯವಿಲ್ಲ. ಈಗಾಗಲೇ ಬಂದು ಹೋಗಿರುವ ತಂಡದ ವರದಿ ಆಧರಿಸಿ ತಕ್ಷಣ ₹5 ಸಾವಿರ ಕೋಟಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಯನ್ನಾದರೂ ನಡೆಸಬೇಕಿತ್ತು. ವಿದೇಶಗಳಿಗೆ ಹೋಗಲು ಅವರಿಗೆ ಸಮಯವಿದೆ. ಸಂತ್ರಸ್ತರ ಅಳಲು ಆಲಿಸಲು ಸಮಯವಿಲ್ಲವೇ? ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಶೀಘ್ರ ಮನೆ ನಿರ್ಮಿಸಿ: ಬೀದಿಗೆ ಬಿದ್ದಿರುವ ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡು, ಮನೆ ಕಳೆದುಕೊಂಡವರಿಗೆ ₹5 ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಿಕೊಡಬೇಕು. ಅಲ್ಲಿಯವರೆಗೂ ಮನೆ ಬಾಡಿಗೆ ಮೊತ್ತವಾಗಿ ಪ್ರತಿ ಕುಟುಂಬಕ್ಕೆ ₹5 ಸಾವಿರ ನೀಡಬೇಕು ಎಂದು ಶಾಸಕ ಡಿ.ಕೆ. ಶಿವಕುಮಾರ ಬುಧವಾರ ಬೆಂಗಳೂರಿನಲ್ಲಿ ಆಗ್ರಹಿಸಿದರು.

*
ಶಾ ಗಮನಕ್ಕೆ ತರದೇ ಯಡಿಯೂರಪ್ಪ ಏನಾದರೂ ಮಾಡಲಾಗುತ್ತದೆಯೇ? ನಮ್ಮನ್ನು ಹೈಕಮಾಂಡ್ ಪಕ್ಷ ಎಂದು ಟೀಕಿಸುತ್ತಿದ್ದರು. ಈಗ ಅವರು ಮಾಡುತ್ತಿರುವುದೇನು?
-ಸಿದ್ದರಾಮಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.