ADVERTISEMENT

ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ

ಆಶ್ರಯ ತಾಣದಲ್ಲಿ 139 ಬೀದಿ ನಾಯಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 22:43 IST
Last Updated 8 ಡಿಸೆಂಬರ್ 2025, 22:43 IST
<div class="paragraphs"><p>ಬೀದಿ ನಾಯಿ</p></div>

ಬೀದಿ ನಾಯಿ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಮೂರು ತಿಂಗಳಿಂದ ಬೀದಿ ನಾಯಿಗಳು 274 ಪ್ರಕರಣಗಳಲ್ಲಿ ಜನರ ಮೇಲೆ ದಾಳಿ ಮಾಡಿದ್ದು, ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಜಿಬಿಎ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಾವಳಿಗೆ ಸಂಬಂಧಿಸಿದಂತೆ ಲೋಕಾಯುಕ್ತರ ವಿಚಾರಣೆಯಲ್ಲಿ ಸೋಮವಾರ ಭಾಗವಹಿಸಿದ್ದ ಪಾಲಿಕೆಗಳ ಪಶು ಸಂಗೋಪನೆ ವಿಭಾಗದ ಸಹಾಯಕ ನಿರ್ದೇಶಕರು ವರದಿ ಸಲ್ಲಿಸಿದರು.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 44 ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು ವರದಿಯಾಗಿದೆ. ಒಬ್ಬ ವ್ಯಕ್ತಿಗೆ ಹಲವು ಕಡೆ ನಾಯಿ ಕಚ್ಚಿದ್ದರಿಂದ ಆತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ  ವಲಯ ಒಂದರಲ್ಲಿ 68 ಹಾಗೂ ವಲಯ –2ರಲ್ಲಿ 26 ಬೀದಿ ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ನಾಲ್ಕು ಉಗ್ರ ನಾಯಿಗಳನ್ನು ಪ್ರತ್ಯೇಕಿಸಿ ಆಶ್ರಯ ಕೇಂದ್ರದಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲಯ 1ರಲ್ಲಿ 32 ಹಾಗೂ ವಲಯ–2ರಲ್ಲಿ 31, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 32 ಪ್ರಕರಣಗಳ ಬೀದಿ ನಾಯಿ ಕಚ್ಚಿದ ಪ್ರಕರಣಗಳಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ. 

ಪೂರ್ವ ನಗರ ಪಾಲಿಕೆ ವ್ಯಾಪ್ತಿಯ 41 ನಾಯಿ ಕಚ್ಚಿದ ಪ್ರಕಣಗಳು ದಾಖಲಾಗಿದ್ದು, ಇದರಲ್ಲಿ ಆಶ್ರಯ ತಾಣದಲ್ಲಿರಿಸಿದ್ದ ನಾಲ್ಕು ನಾಯಿಗಳು ಸತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆಶ್ರಯ ತಾಣದಲ್ಲಿ ಬೀದಿ ನಾಯಿಗಳ ಸುರಕ್ಷತೆ ಬಗ್ಗೆ ಖಾತರಿಪಡಿಸಿಕೊಳ್ಳುವಂತೆ ಲೋಕಾಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿದ್ದ ಉಗ್ರ 139 ಬೀದಿ ನಾಯಿಗಳನ್ನು ಆಶ್ರಯ ತಾಣದಲ್ಲಿ ಇರಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 7617 ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಡಿ.25ರ ಒಳಗೆ  ಆಶ್ರಯ ತಾಣಗಳಿಗೆ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶು ಸಂಗೋಪನೆ ವಿಭಾಗದ ಉಪ ನಿರ್ದೇಶಕರು ಲೋಕಾಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

ಆಶ್ರಯ ತಾಣದಲ್ಲಿ ಕೋಳಿ ಮಾಂಸ

ಆಶ್ರಯ ತಾಣದಲ್ಲಿರಿಸಲಾಗುವ ಬೀದಿ ನಾಯಿಗಳಿಗೆ ಕೋಳಿ ಮಾಂಸ ಸೇರಿದಂತೆ  ಪೋಷಕಾಂಶಯುಕ್ತ ಆಹಾರ ನೀಡಲು ನಗರ ಪಾಲಿಕೆಗಳು ನಿರ್ಧರಿಸಿವೆ.

ಬಿಬಿಎಂಪಿಯಾಗಿದ್ದಾಗ 2025ರ ಜುಲೈನಲ್ಲಿ ಬೀದಿ ನಾಯಿಗಳಿಗೆ ₹2.88  ಕೋಟಿ ವೆಚ್ಚದಲ್ಲಿ ಆಹಾರ ನೀಡಲು ನಿರ್ಧರಿಸಲಾಗಿತ್ತು. ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿತ್ತು. ಸುಪ್ರೀಂ ಕೋರ್ಟ್‌ ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸ್ಥಳಾಂತರಿಸಬೇಕು ಎಂದು ಸೂಚಿಸಿರುವುದರಿಂದ ಮತ್ತೆ ‘ಚಿಕನ್‌ ರೈಸ್‌’ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.

‘ಈ ಹಿಂದೆ ಒಂದು ಬಾರಿ ಊಟ ನೀಡುವ ಯೋಜನೆ ಇತ್ತು. ಆಶ್ರಯ ತಾಣದಲ್ಲಿ ಎರಡು ಬಾರಿ ಊಟ ನೀಡುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಪಾಲಿಕೆಗಳ ವ್ಯಾಪ್ತಿಯಲ್ಲೇ ಟೆಂಡರ್‌ ಕರೆಯಲಾಗುತ್ತದೆ. ಕೋಳಿ ಮಾಂಸವನ್ನು ಎರಡು ಬಾರಿ ನೀಡಬೇಕೇ ಅಥವಾ ಒಂದು ಬಾರಿ ಸಾಕೇ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಎರಡು ಬಾರಿ ಊಟ ನೀಡುವುದರಿಂದ ವೆಚ್ಚ ಮೊದಲಿನ ಅಂದಾಜಿಗಿಂತ ಹೆಚ್ಚಾಗಲಿದೆ’ ಎಂದು ಪಶು ಸಂಗೋಪನೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.