ADVERTISEMENT

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ವ್ಯಾಪಾರಿಗಳ ಕುಟುಂಬ ಬೀದಿಪಾಲು

ವಿಜಯಕುಮಾರ್ ಎಸ್.ಕೆ.
Published 2 ನವೆಂಬರ್ 2021, 16:21 IST
Last Updated 2 ನವೆಂಬರ್ 2021, 16:21 IST
ಗಾಂಧಿ ನಗರದಲ್ಲಿ ಬೀದಿ ಬದಿ ಬಟ್ಟೆ ಮಾರಾಟಕ್ಕೆ ಗ್ರಾಹಕರಿಲ್ಲದಿರುವುದು –ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.
ಗಾಂಧಿ ನಗರದಲ್ಲಿ ಬೀದಿ ಬದಿ ಬಟ್ಟೆ ಮಾರಾಟಕ್ಕೆ ಗ್ರಾಹಕರಿಲ್ಲದಿರುವುದು –ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಗೋಗರೆದರೂ ಸಿಗದ ಹೊಸ ಸಾಲ, ಕಣ್ಮರೆಯಾದ ಬಡವರ ಬಂಧು ಯೋಜನೆ, ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಮರೀಚಿಕೆಯಾದ ಪರಿಹಾರ... ಇದು ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳ ಸ್ಥಿತಿ.

ಕೋವಿಡ್‌ ಬಳಿಕ ಸಂಕಷ್ಟದ ಸುಳಿಯಲ್ಲಿ ಮುಳುಗಿರುವ ಬೀದಿ ಬದಿ ವ್ಯಾಪಾರಿಗಳು ಚೇತರಿಸಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಸರ್ಕಾರದ ನೆರವಿನ ನಿರೀಕ್ಷೆಗಳೂ ಹುಸಿಯಾಗಿ ಕಂಗಾಲಾಗಿದ್ದಾರೆ. ಅಂದೇ ದುಡಿದು ತಿನ್ನಬೇಕಾದ ಸ್ಥಿತಿಯಲ್ಲಿರುವ ವ್ಯಾಪಾರಿಗಳಿಗೆ ದುಡಿಮೆಯೇ ಇಲ್ಲದೆ ಕೈಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿದ್ದಾರೆ.

ಕೋವಿಡ್ ಎರಡು ಅಲೆಗಳು ಹಲವು ವ್ಯಾಪಾರಿಗಳ ಬದುಕನ್ನು ಮತ್ತಷ್ಟು ಬೀದಿಗೆ ತಳ್ಳಿದ್ದರೆ, ಕೆಲವರ ಜೀವವನ್ನೇ ಬಲಿ ಪಡೆದಿದೆ. ಕುಟುಂಬಕ್ಕೆ ಆಧಾರ ಆಗಿದ್ದವರನ್ನೇ ಕಳೆದುಕೊಂಡು ಬೀದಿ ಬದಿ ವ್ಯಾಪಾರಿಗಳ ಕುಟುಂಬಗಳು ಅನಾಥವಾಗಿವೆ. ಗಾಂಧಿ ಬಜಾರ್‌ನಲ್ಲಿ ಮಹಾದೇವ ಎಂಬ ಬೀದಿ ವ್ಯಾಪಾರಿ ಕೋವಿಡ್ ಎರಡನೇ ಅಲೆಯಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟರು. ಅವರ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ADVERTISEMENT

ಗಾಂಧಿ ಬಜಾರ್‌ನಲ್ಲಿ ತಳ್ಳು ಗಾಡಿಯ ಮೇಲೆ ಹಣ್ಣುಗಳನ್ನು ಜೋಡಿಸಿಕೊಂಡು ಮಹಾದೇವ ಜೀವನ ಕಟ್ಟಿಕೊಂಡಿದ್ದರು. ಇಬ್ಬರು ಪುಟಾಣಿ ಮಕ್ಕಳು ಮತ್ತು ಹೆಂಡತಿ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸಾವಿನ ಆಘಾತದಿಂದ ಕುಟುಂಬ ಸದಸ್ಯರು ಇನ್ನೂ ಹೊರಗೆ ಬಂದಿಲ್ಲ.

‘ಇಡೀ ಕುಟುಂಬಕ್ಕೆ ಮಹಾದೇವ ಆಧಾರಸ್ಥಂಭವಾಗಿದ್ದರು. ಹೆಂಡತಿಗೆ ವ್ಯಾಪಾರ ವಹಿವಾಟಿನ ಬಗ್ಗೆ ಅರಿವಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸಲು ಆಗದ ಸ್ಥಿತಿಯಲ್ಲಿ ಇದ್ದೇವೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ’ ಎಂದು ಮಹಾದೇವ ಅವರ ಸಹೋದರಿ ನಂಜಾಮಣಿ ಗದ್ಘದಿತರಾದರು.

‘ಇದೇ ರೀತಿ ಒಂದೇ ಕುಟುಂಬದಲ್ಲಿ ಮೂವರನ್ನು ಕಳೆದುಕೊಂಡು ವ್ಯಾಪಾರಿಗಳು ಗಾಂಧಿ ಬಜಾರ್‌ನಲ್ಲಿದ್ದಾರೆ. ಯಾರೊಬ್ಬರಿಗೂ ಸರ್ಕಾರದಿಂದ ಪರಿಹಾರ ಬಂದಿಲ್ಲ. ಜೀವನವೇ ಸಾಕು ಎನ್ನುವಷ್ಟು ಬೇಸರವಾಗಿದೆ’ ಎಂದು ಅವರು ಕಣ್ಣೀರು ಹಾಕಿದರು.

‘ವ್ಯಾಪಾರ ವಹಿವಾಟು ಮುಂದುವರಿಸಲು ₹5 ಸಾವಿರ, ₹10 ಸಾವಿರ ಸಾಲ ಕೇಳಿ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಸಾಲ ಕೊಡಲು ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಿದ್ದು, ದಿನವೂ ಬ್ಯಾಂಕ್‌ಗಳಿಗೆ ಎಡತಾಕಿ ಸಾಕಾಗಿದೆ’ ಎಂದು ಗಾಂಧಿನಗರದ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ರಾಜ್ಯದ ನೆರವು ಕೇಂದ್ರ ಸಾಲಕ್ಕೆ ಚುಕ್ತಾ

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ನೀಡಿದ ₹2 ಸಾವಿರ ನೆರವು ಕೇಂದ್ರ ಸರ್ಕಾರವು ಕಳೆದ ವರ್ಷ ನೀಡಿದ್ದ ಸಾಲಕ್ಕೆ ಚುಕ್ತಾ ಆಗಿದೆ.

ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆಯಡಿ ₹10 ಸಾವಿರ ಸಾಲವನ್ನು ಕಳೆದ ಸಾಲಿನಲ್ಲಿ ನೀಡಿತ್ತು. ಅದನ್ನು ಕಂತು ರೂಪದಲ್ಲಿ ವ್ಯಾಪಾರಿಗಳು ಮರುಪಾವತಿ ಮಾಡಬೇಕಿತ್ತು. ಆದರೆ, ಸಂಕಷ್ಟದ ದಿನಗಳಲ್ಲಿ ಮರು ಪಾವತಿ ಮಾಡಲು ವ್ಯಾಪಾರಿಗಳಿಂದ ಸಾಧ್ಯವಾಗಿಲ್ಲ.

ಅನ್ನಕ್ಕೂ ಗತಿ ಇಲ್ಲದ ಸ್ಥಿತಿಯಲ್ಲಿದ್ದ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರದಿಂದ ₹2 ಸಾವಿರ ನೆರವು ನೀಡಿತು. ಅದನ್ನು ಬ್ಯಾಂಕ್ ಖಾತೆಗಳನ್ನು ಸರ್ಕಾರ ಜಮಾ ಮಾಡಿತು. ರಾಜ್ಯ ಸರ್ಕಾರದಿಂದ ನೆರವು ಜಮಾ ಆದ ಕೂಡಲೇ ಬ್ಯಾಂಕ್‌ಗಳು ಅದನ್ನು ಸಾಲಕ್ಕೆ ಚುಕ್ತಾ ಮಾಡಿಕೊಂಡಿವೆ.

‘ಎಲ್ಲ ವ್ಯಾಪಾರಿಗಳಿಗೆ ₹2 ಸಾವಿರ ನೆರವು ಸಿಗಲಿಲ್ಲ. ಕೆಲವರ ಖಾತೆಗೆ ಜಮಾ ಆದರೂ, ವ್ಯಾಪಾರಿಗಳ ಕೈಗೆ ಸಿಗಲಿಲ್ಲ. ರಾಜ್ಯ ಸರ್ಕಾರದ ನೆರವಿನ ಮೊತ್ತ ಕೇಂದ್ರ ಸರ್ಕಾರದ ಪಾಲಾಯಿತು’ ಎಂದು ಬೀದಿ ಬದಿ ವ್ಯಾಪಾರಿಗಳ ಪರ ಹೋರಾಟಗಾರ ವಿನಯ ಶ್ರೀನಿವಾಸ್ ಹೇಳಿದರು.

ಕಣ್ಮರೆಯಾದ ಬಡವರ ಬಂಧು

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದರು. ಅದರ ಅಡಿಯಲ್ಲಿ ₹5 ಸಾವಿರದಿಂದ ₹10 ಸಾವಿರ ನೆರವು ಘೋಷಿಸಿದ್ದರು. ಕೆಲವರು ಅದರ ಲಾಭ ದೊರೆಯಿತು.

‘ಈ ಯೋಜನೆಯ ಲಾಭ ಪಡೆಯುವ ಪ್ರಕ್ರಿಯೆ ಕೂಡ ಸುಲಭವಾಗಿತ್ತು. ಆದರೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಕೂಡಲೇ ಯೋಜನೆಯೂ ಸ್ಥಗಿತಗೊಂಡಿತು’ ಎಂದು ವಿನಯ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.