ADVERTISEMENT

ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ: ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ

ಪಿಡಬ್ಲ್ಯುಡಿ 930 ಎಂಜಿನಿಯರ್‌ಗಳ ನೇಮಕಾತಿ: 130 ಕೇಂದ್ರಗಳಲ್ಲಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:08 IST
Last Updated 13 ಡಿಸೆಂಬರ್ 2021, 6:08 IST
ಜಿ.ಸತ್ಯವತಿ
ಜಿ.ಸತ್ಯವತಿ   

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯುಡಿ) ಖಾಲಿ ಇರುವ ಸಹಾಯಕ ಎಂಜಿನಿಯರ್‌ (ಎಇ) 660 ಮತ್ತು ಕಿರಿಯ ಎಂಜಿನಿಯರ್‌ (ಜೆಇ) 330 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ರಾಜ್ಯದ 130 ಕೇಂದ್ರಗಳಲ್ಲಿ ಸೋಮವಾರ (ಡಿ. 13) ಮತ್ತು ಮಂಗಳವಾರ (ಡಿ. 14) ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.

‘ಎಇ ಹುದ್ದೆಗೆ 55 ಸಾವಿರ ಅಭ್ಯರ್ಥಿಗಳು, ಜೆಇ ಹುದ್ದೆಗೆ 22 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೆಲವು ಅಭ್ಯರ್ಥಿಗಳು ಎರಡೂ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ 15 ರಂದು ನಡೆಯಲಿರುವ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಸುಮಾರು 9 ಸಾವಿರ ಅಭ್ಯರ್ಥಿಗಳು ಬರೆಯಲಿದ್ದಾರೆ. ಬಹುತೇಕ ಮಂದಿ ಈಗಾಗಲೇ ಪ್ರವೇಶಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಅಕ್ರಮ ನಡೆಯಬಾರದು ಎಂಬ ಕಾರಣಕ್ಕೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದರು.

‘ಬೆಂಗಳೂರಿನ 52, ಮೈಸೂರಿನ 36, ಧಾರವಾಡದ 7, ಕಲಬುರಗಿಯ 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅತ್ಯಾಧುನಿಕ ಬ್ಲೂ ಟೂತ್‌ ಸಾಧನದ ಮೂಲಕ ಪರೀಕ್ಷಾ ಅಕ್ರಮ ನಡೆಸುವ ಸಾಧ್ಯತೆಯ ಬಗ್ಗೆ ದೂರುಗಳು ಬಂದಿರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ ಅಳವಡಿಸಲಾಗಿದೆ. ಅಭ್ಯರ್ಥಿಗಳಿಗೆ ಅವರ ಸ್ವಂತ ಊರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ’ ಎಂದರು.

ADVERTISEMENT

‘ದೂರದ ಊರುಗಳಲ್ಲಿ ಪರೀಕ್ಷಾ ಕೇಂದ್ರ ನೀಡಿದ ಬಗ್ಗೆ ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಪಾರದರ್ಶಕ ಮತ್ತು ಕಟ್ಟುನಿಟ್ಟಿನಿಂದ ಪರೀಕ್ಷೆ ನಡೆಸಲು ಇಂಥ ಕ್ರಮ ಅನಿವಾರ್ಯ. ಅಭ್ಯರ್ಥಿಗಳ ಪ್ರಯಾಣಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಹೆಚ್ಚಿನ ಬಸ್‌ ಸೌಲಭ್ಯ ಒದಗಿಸಲು ಸಾರಿಗೆ ಸಂಸ್ಥೆ ತಿಳಿಸಲಾಗಿದೆ. ರೈಲು ಸೇವೆಯನ್ನೂ ಒದಗಿಸುವಂತೆ ನೈರುತ್ಯ ರೈಲ್ವೆಗೂ ಮನವಿ ಮಾಡಲಾಗಿದೆ’ ಎಂದರು.

‘ಪ್ರಶ್ನೆಪತ್ರಿಕೆ ವಿಚಾರದಲ್ಲೂ ಪರೀಕ್ಷಾ ನಿಯಂತ್ರಕರು ಹೊಸ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ಅಭ್ಯರ್ಥಿಗಳು ಫಿಲ್ಟರ್‌ ಮಾಸ್ಕ್‌ ಬಳಸಲು ಅವಕಾಶ ಇಲ್ಲ. ಪರೀಕ್ಷಾ ಕೊಠಡಿಗಳಿಗೆ ‘ಡಿ’ ದರ್ಜೆಯ ನೌಕರರಿಗೆ ಪ್ರವೇಶ ನಿಷೇಧಿಸಲಾಗಿದೆ. ಪರೀಕ್ಷೆ ನಡೆಯುತ್ತಿರುವ ಮಧ್ಯೆ ಶೌಚಾಲಯಕ್ಕೆ ಹೋಗುವವರ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ಮೇಲೆ ಹದ್ದಿನ ಕಣ್ಣಿಡುವಂತೆ ಪೊಲೀಸ್‌ ಇಲಾಖೆಗೂ ಕೋರಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.