ಬೆಂಗಳೂರು: ಬಂಡವಾಳಶಾಹಿಗಳು, ಬೂರ್ಜ್ವಾಗಳು ಹೆಚ್ಚು ಆಕ್ರಮಣಕಾರಿಗಳಾಗಿದ್ದಾರೆ. ಅದರ ವಿರುದ್ಧ ಪ್ರತಿಹೋರಾಟ ಕಟ್ಟದೇ ಇದ್ದರೆ ಕಾರ್ಮಿಕರ, ಶೋಷಿತರ ನಾಳೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅಥೆನ್ಸ್‌ನ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಅಧ್ಯಕ್ಷ ಜಾರ್ಜಿಯಸ್ ಮಾವ್ರಿಕೋಸ್ ತಿಳಿಸಿದರು.
ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ (ಡಬ್ಲ್ಯುಎಫ್‌ಟಿಯು) ಗುರುವಾರ ಹಮ್ಮಿಕೊಂಡಿದ್ದ ‘ಪ್ರಸ್ತುತ ಕಾರ್ಮಿಕ ವರ್ಗದ ಮುಂದಿರುವ ಅಂತರರಾಷ್ಟ್ರೀಯ ಸವಾಲುಗಳು, ಜಾಗತಿಕ ಕಾರ್ಮಿಕ ಚಳವಳಿಯ ಕಾರ್ಯತಂತ್ರ ಮತ್ತು ಕಾರ್ಯವಿಧಾನ, ಇತಿಹಾಸದ ಮೇಲಿನ ವಿಮರ್ಶಾತ್ಮಕ ಟಿಪ್ಪಣಿಗಳು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳು ಸಾಮ್ರಾಜ್ಯಶಾಹಿಗೆ ಪೂರಕವಾಗಿವೆ. ಸಾಮ್ರಾಜ್ಯಶಾಹಿಗಳು ಯುದ್ಧೋನ್ಮಾದದಿಂದ ವರ್ತಿಸುತ್ತಿದ್ದಾರೆ. ಅದರ ವಿರುದ್ಧ ವ್ಯಾಪಕವಾಗಿ ಮತ್ತು ಏಕತೆಯಿಂದ ಹೋರಾಡಬೇಕಿದೆ ಎಂದು ಹೇಳಿದರು.
‘ನಮ್ಮ ನಮ್ಮ ದೇಶಗಳೊಳಗಿನ ಸಮಸ್ಯೆಗಳ ಪರಿಹಾರಕ್ಕಾಗಿ ಚಳವಳಿ ರೂಪಿಸಬೇಕು. ಅದರ ಜೊತೆಗೆ ಅಂತರರಾಷ್ಟ್ರೀಯ ಸಮಸ್ಯೆಗಳ ವಿರುದ್ಧವೂ ನಾವಿರಬೇಕು. ಪ್ಯಾಲೆಸ್ಟೀನ್ ಜನರ ಮೇಲೆ ಇಸ್ರೇಲ್ ಮಾಡಿದ ದೌರ್ಜನವನ್ನೂ ವಿರೋಧಿಸಬೇಕು. ಬೇರೆ ಯಾವುದೇ ದೇಶ ಇನ್ನೊಂದು ದೇಶದ ವಿರುದ್ಧ ಯುದ್ಧ ಸಾರಿದರೂ ವಿರೋಧಿಸಬೇಕು. ಎಲ್ಲ ತರಹದ ಹಿಟ್ಲರಿಸಂ, ಫ್ಯಾಸಿಸಂಗಳ ವಿರುದ್ಧ ನಾವಿರಬೇಕು’ ಎಂದರು.
ಸಂಪತ್ತಿನಿಂದ, ಯುದ್ಧನೀತಿಯಿಂದ, ಮಿಲಿಟರಿ ಶಕ್ತಿಯಿಂದ ಜನರನ್ನು ದಮನಿಸಲಾಗುತ್ತಿದೆ. ಯುವಜನರನ್ನು ಬಂಡವಾಳಶಾಹಿಗಳು ಸುಲಭವಾಗಿ ದಾರಿ ತಪ್ಪಿಸುತ್ತಾರೆ. ಯುವಜನರ ಹಕ್ಕುಗಳು, ಉದ್ಯೋಗಿಗಳ ಹಕ್ಕುಗಳು, ಮಹಿಳೆಯರ ಹಕ್ಕುಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಕಾರ್ಮಿಕರ ಹೋರಾಟ ಮುಗಿದು ಹೋದ ಅಧ್ಯಾಯವಲ್ಲ. ಇಂದಿಗೂ ಪ್ರಸ್ತುತ, ನಾಳೆಗೂ ಬೇಕಾಗಿದೆ. ಉತ್ತಮ ನಾಳೆಗಳಿಗಾಗಿ ಇಂದು ಚಳವಳಿ ಕಟ್ಟಬೇಕು ಎಂದು ಸಲಹೆ ನೀಡಿದರು.
ಡಬ್ಲ್ಯುಎಫ್‌ಟಿಯು ಕಾರ್ಯದರ್ಶಿ ಅರ್ಚೊಂಟಿಯಾ ಅನಸ್ತಸಕಿ. ಉಪ ಪ್ರಧಾನ ಕಾರ್ಯದರ್ಶಿ ಸ್ವದೇಶ್ ದೇಬರಾಯ್, ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಎಚ್. ಮಹಾದೇವನ್, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಟಿಯುಸಿಸಿ, ಎಐಐಇಎ, ಕೆಪಿಬಿಇಎಫ್, ಬಿಇಎಫ್‌ಐ, ಬಿಎಸ್‌ಎನ್‌ಎಲ್‌ಇಯು, ಎಐಎಸ್‌ಜಿಇಎಫ್ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.