ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಬಳಿ ಗುರುವಾರ ಸಂಜೆ ನಡೆದಿದೆ.
ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿ ಪ್ರಿಯಾ (20) ಕೊಲೆಯಾದ ವಿದ್ಯಾರ್ಥಿನಿ.
ಪ್ರಿಯಾ ಅವರ ಮನೆಯ ಪಕ್ಕದಲ್ಲೇ ವಾಸವಾಗಿದ್ದ ವಿಘ್ನೇಶ್ ಎಂಬಾತ ಕೃತ್ಯ ಎಸಗಿದ್ದು ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ವಿಘ್ನೇಶ್ ಜಿಮ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.
ಗೋಪಾಲ್ ಅವರ ಪುತ್ರಿ ಪ್ರಿಯಾ ಅವರು ಬನಶಂಕರಿ ಮೂರನೇ ಹಂತದ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮಾ ಓದುತ್ತಿದ್ದರು. ಮನೆಯ ಪಕ್ಕದ ನಿವಾಸಿ ವಿಘ್ನೇಶ್ ಪರಿಚಯವಾಗಿದ್ದ. ಪ್ರೀತಿಸುವಂತೆ ಆರೋಪಿ ವಿಘ್ನೇಶ್ ಬಲವಂತ ಮಾಡುತ್ತಿದ್ದ. ಆದರೆ, ಪ್ರಿಯಾ ಅವರು ನಿರಾಕರಿಸಿದ್ದರು ಎಂದು ಮೂಲಗಳು ಹೇಳಿವೆ.
ಪ್ರತಿನಿತ್ಯ ಬಿಎಂಟಿಸಿ ಬಸ್‍ನಲ್ಲಿ ಯಾಮಿನಿ ಪ್ರಿಯಾ ಕಾಲೇಜಿಗೆ ಹೋಗುತ್ತಿದ್ದರು. ಈ ವಿಚಾರ ತಿಳಿದುಕೊಂಡಿದ್ದ ಆರೋಪಿ, ಶ್ರೀರಾಂಪುರ ಬಸ್ ನಿಲ್ದಾಣದ ಬಳಿ ಗುರುವಾರ ಕಾದು ನಿಂತಿದ್ದ. ಮಧ್ಯಾಹ್ನ 2.30ರ ಸುಮಾರಿಗೆ ಬನಶಂಕರಿ ಮೂರನೇ ಹಂತದಿಂದ ಬಿಎಂಟಿಸಿ ಬಸ್‍ನಲ್ಲಿ ಶ್ರೀರಾಂಪುರಕ್ಕೆ ಬಂದಿಳಿದ ಯಾಮಿನಿ, ರೈಲ್ವೆ ಹಳಿಯ ಪಕ್ಕದ ಕಾಲು ದಾರಿಯಲ್ಲಿ ಮನೆಗೆ ನಡೆದು ಹೋಗುತ್ತಿದ್ದರು. ಆಗ ಒಬ್ಬನೇ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ನಾಲ್ಕು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಬಲವಂತವಾಗಿ ತಾಳಿ ಕಟ್ಟಿದ್ದ ಆರೋಪಿ
ಯಾಮಿನಿ ಪ್ರಿಯಾ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಒಮ್ಮೆ ಪ್ರಿಯಾಗೆ ಬಲವಂತವಾಗಿ ತಾಳಿ ಕೂಡ ಕಟ್ಟಿದ್ದ. ಪ್ರಿಯಾ ಅವರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಹೇಳಿದರು.
‘ವಿಘ್ನೇಶ್ ಕಳೆದ ಹಲವು ತಿಂಗಳಿನಿಂದ ನನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಈ ಸಂಬಂಧ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದೆವು. 6 ತಿಂಗಳ ಹಿಂದೆ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು’ ಎಂದು ಪ್ರಿಯಾ ತಂದೆ ಗೋಪಾಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.