ADVERTISEMENT

ಭೀತಿ ಹುಟ್ಟಿಸುವ ಸೈರನ್‌, ಯುದ್ದ ವಿಮಾನಗಳ ಹಾರಾಟ....

ಪಶ್ಚಿಮ ಉಕ್ರೇನ್‌ನ ಅತಿ ದೊಡ್ಡ ನಗರ ಲಿವೀವ್‌ನ ಸ್ಥಿತಿ ವಿವರಿಸಿದ ಮೊಹ್ಮದ್‌ ಅಲಿ ಅಮೀರ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 19:31 IST
Last Updated 24 ಫೆಬ್ರುವರಿ 2022, 19:31 IST
15 ವಿದ್ಯಾರ್ಥಿಗಳು ಸಿಲುಕಿರುವ ಪಶ್ಚಿಮ ಉಕ್ರೇನ್‌ನ ಲಿವೀವ್‌ನ ಕಟ್ಟಡ
15 ವಿದ್ಯಾರ್ಥಿಗಳು ಸಿಲುಕಿರುವ ಪಶ್ಚಿಮ ಉಕ್ರೇನ್‌ನ ಲಿವೀವ್‌ನ ಕಟ್ಟಡ   

ಬೆಂಗಳೂರು: ಭೀತಿ ಹುಟ್ಟಿಸುವ ಸೈರನ್‌, ಆಕಾಶದಲ್ಲಿ ಯುದ್ದ ವಿಮಾನಗಳ ಹಾರಾಟ, ವಾಯು ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಎಚ್ಚರಿಕೆ, ಈ ಮಧ್ಯೆ, ಕಟ್ಟಡಗಳ ನೆಲಮಹಡಿಯಲ್ಲಿ ಆಶ್ರಯ ಪಡೆದವರು ಆತಂಕದಿಂದಲೇ ಹೊರ ಹೋಗಿ ದಿನಸಿ ವಸ್ತುಗಳನ್ನು ಸಂಗ್ರಹಿಸುತ್ತಿರುವ ದೃಶ್ಯ...

ಇದು ಪಶ್ಚಿಮ ಉಕ್ರೇನ್‌ನ ಅತಿ ದೊಡ್ಡ ನಗರವಾದ ಲಿವೀವ್‌ನ ಸದ್ಯದ ಸ್ಥಿತಿ. ಬೆಂಗಳೂರಿನ ವಿದ್ಯಾರ್ಥಿಯೂ ಸೇರಿ ಭಾರತೀಯ ಮೂಲದ 15 ಪಶು ವೈದ್ಯಕೀಯ ಕೋರ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳು ಇಲ್ಲಿ ಸಿಲುಕಿದ್ದು, ಯಾವುದೇ ನೆರವು ಇಲ್ಲದೆ ಪರದಾಡುತ್ತಿದ್ದಾರೆ.

‘ಇಲ್ಲಿನ ನಗರದ ಮಧ್ಯಭಾಗದಲ್ಲಿರುವ ಮೇಯರ್‌ ಕಚೇರಿಯ ಎದುರಿನಲ್ಲಿರುವ ಸರ್ಕಾರಿ ಕಟ್ಟಡದಲ್ಲಿ ಮುಂದೇನಾಗುವುದೋ ಎಂಬ ಭೀತಿಯಿಂದ ಪರಸ್ಪರ ಮಾತನಾಡುತ್ತಾ ಸಮಯ ಕಳೆಯುತ್ತಿದ್ದೇವೆ’ ಎಂದು ಲಿವೀವ್‌ ನಗರದ ಸ್ಥಿತಿಯನ್ನು ಅಲ್ಲಿನ ಪಶುವಿಜ್ಞಾನ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಓದುತ್ತಿರುವ ಬಸವನಗುಡಿಯ ನಿವಾಸಿ ಮೊಹ್ಮದ್‌ ಅಲಿ ಅಮೀರ್‌ ಅವರು ‘ವಾಟ್ಸ್‌ ಆ್ಯಪ್‌’ ಕರೆ ಮಾಡಿ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

‘ಮಕ್ಕಳು, ಮಹಿಳೆಯರು ವೃದ್ಧರನ್ನು ಕಟ್ಟಡಗಳ ನೆಲಮಹಡಿಗಳ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನಾವು ಕೂಡಾ ಇಲ್ಲಿ ಆಶ್ರಯ ಪಡೆದಿದ್ದೇವೆ. ಸದ್ಯಕ್ಕೆ ಸುರಕ್ಷಿತವಾಗಿದ್ದೇವೆ. ಆದರೆ, ಯಾವಾಗ ಬಾಂಬ್ ಬೀಳಬಹುದು ಎನ್ನುವುದು ಗೊತ್ತಿಲ್ಲ. ಯಾರಿಗೂ ಯಾವುದೇ ‌ಮಾಹಿತಿ ಇಲ್ಲ. ಭಾರತೀಯ ರಾಯಭಾರಿ ಕಚೇರಿಯಿಂದಲೂ ನಮಗೆ ಯಾವುದೇ ಮಾಹಿತಿ ಇಲ್ಲ’ ಎಂದರು.

‘ಭಾರತೀಯ ಮೂಲದ ವಿದ್ಯಾರ್ಥಿಗಳು ಇಲ್ಲಿರುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ಸಂದೇಶ ರವಾನಿಸುವಲ್ಲಿ ಸಫಲರಾಗಿದ್ದೇವೆ. ಆದರೆ, ಉಕ್ರೇನ್‌ನಲ್ಲಿ ವೈಮಾನಿಕ ಸಂಚಾರವನ್ನು ತಡೆ ಹಿಡಿಯಲಾಗಿದೆ. ಹೀಗಾಗಿ, ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿರುವುದದಾಗಿ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಅಮೀರ್‌ ತಿಳಿಸಿದರು.

ಮೊಹ್ಮದ್‌ ಅಲಿ ಅಮೀರ್‌

‘ಬ್ಯಾಂಕುಗಳ ಮೇಲೆ ದಾಳಿ ನಡೆದಿದ್ದು, ಅವುಗಳು ಸಂಪೂರ್ಣ ನಾಶ ಆಗಿವೆ. ಹೀಗಾಗಿ ನಗದು ಸಿಗುತ್ತಿಲ್ಲ. ಭಾರತೀಯ ಕ್ರೆಡಿಟ್‌ ಕಾರ್ಡ್‌ಗಳನ್ನು ಸ್ವೀಕರಿಸುತ್ತಿಲ್ಲ. ದಿನಸಿ ವಸ್ತುಗಳನ್ನು ಖರೀದಿಸಲು ಸೂಪರ್ ಮಾರ್ಕೆಟ್‌ಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ನಮ್ಮಲ್ಲಿ ಕೆಲವೇ ಡಾಲರ್‌ ಉಳಿದಿದೆ. ಒಂದು ವಾರಕ್ಕೆ ಸಾಕಾಗುವಷ್ಟು ಅಕ್ಕಿ, ಒಣ ಹಣ್ಣುಗಳು, ನೀರಿನ ಬಾಟಲಿ ಖರೀದಿಸಲು ನಮ್ಮಲ್ಲಿರುವ ಹಣವನ್ನು ಹೊಂದಿಸುತ್ತಿದ್ದೇವೆ. ಪರಿಸ್ಥಿತಿ ಯಾವ ಹಂತಕ್ಕೆ ಹೋಗಬಹುದೆಂಬ ಬಗ್ಗೆ ಏನೂ ಗೊತ್ತಾಗುತ್ತಿಲ್ಲ. ನಗರದಿಂದ ಆದಷ್ಟು ಬೇಗ ಹೊರಗೆ ಹೋಗಬೇಕು ಎನ್ನುವುದು ನಮ್ಮ ಗುರಿ. ಪೋಲೆಂಡ್‌ ಗಡಿ ನಾವಿರುವ ಜಾಗದಿಂದ 40 ಕಿ.ಮೀ ದೂರವಿದೆ. ಅದೃಷ್ಟವೆಂದರೆ ಆ ದೇಶದ ಗಡಿ ಭಾರತೀಯರಿಗೆ ಮುಕ್ತವಾಗಿದೆ. ಆದರೆ, ಅಲ್ಲಿಗೆ ಹೋಗಲು ಸಾರಿಗೆ ಸೌಲಭ್ಯ ಇಲ್ಲ. ಅಲ್ಲದೆ, ಅಲ್ಲಿಗೆ ಈಗ ಪ್ರಯಾಣಿಸುವುದು ಸುರಕ್ಷಿತವೂ ಅಲ್ಲ. ಆದರೂ ಕಾರುಗಳನ್ನು ಬಾಡಿಗೆಗೆ ಪಡೆದು ಗಡಿಗೆ ತಲುಪುವ ಬಗ್ಗೆ ಸ್ಥಳೀಯರ ಜೊತೆ ನಾವು ಮಾತನಾಡುತ್ತಿದ್ದೇವೆ’ ಎಂದೂ ಅಮೀರ್‌ ತಿಳಿಸಿದರು.

‘ಕಳೆದ ಎರಡು ದಿನಗಳಿಂದ ನಾವು ಆತಂಕದಲ್ಲಿ ಕಳೆಯುತ್ತಿದ್ದೇವೆ. ಮಕ್ಕಳು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದೇವೆ’ ಎಂದು ಅಮೀರ್‌ ಅವರ ತಂದೆ ನದೀಮ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.