ADVERTISEMENT

GBA ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಜೂನ್‌ನಲ್ಲಿ ಚುನಾವಣೆ: ಸುಪ್ರಿಂಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 0:24 IST
Last Updated 13 ಜನವರಿ 2026, 0:24 IST
   

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿದೆ. 

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರ ಪೀಠವು, ವಾರ್ಡ್‌ವಾರು ಅಂತಿಮ ಮೀಸಲಾತಿಯನ್ನು ಫೆ.20ರೊಳಗೆ ಪ್ರಕಟಿಸುವಂತೆ ನಿರ್ದೇಶನ ನೀಡಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ, ‘ಚುನಾವಣೆಯ ಪೂರ್ವಸಿದ್ಧತೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ವಾರ್ಡ್‌ವಾರು ಅಂತಿಮ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೊಂದು ತಿಂಗಳು ಬೇಕು. ಈ ಪ್ರಕ್ರಿಯೆಯನ್ನು ಫೆ.20ರೊಳಗೆ ಮುಗಿಸುತ್ತೇವೆ’ ಎಂದರು. 

ADVERTISEMENT

ಪಾಲಿಕೆ ಮಾಜಿ ಸದಸ್ಯ ಎಂ.ಶಿವರಾಜು ಮತ್ತಿತರ ಅರ್ಜಿದಾರರ ಪರ ವಕೀಲರು, ‘ಬಿಬಿಎಂಪಿಗೆ 2013ರಲ್ಲಿ ಚುನಾವಣೆ ನಡೆದಿತ್ತು. ಸದಸ್ಯರ ಅಧಿಕಾರದ ಅವಧಿ 2019ರಲ್ಲಿ ಮುಗಿದಿತ್ತು. ರಾಜ್ಯ ಸರ್ಕಾರ ಪದೇ ಪದೇ ನೆಪ ಹೇಳಿ ಚುನಾವಣೆ ನಡೆಸದೆ ಕಾಲಹರಣ ಮಾಡುತ್ತಿದೆ’ ಎಂದು ದೂರಿದರು. 

ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ‘ವಾರ್ಡ್ ಮರುವಿಂಗಡಣೆ ಮಾಡಿ ಮೀಸಲಾತಿ ಪಟ್ಟಿ ಅಂತಿಮಗೊಳಿಸಲು ಡಿಸೆಂಬರ್‌ 15ರ ವರೆಗೆ ಕಾಲಾವಕಾಶ ಕೇಳಿದ್ದೆವು. ಈ ಪ್ರಕ್ರಿಯೆ ಒಂದು ತಿಂಗಳು ತಡವಾಗಿದೆ. ಇನ್ನೊಂದು ತಿಂಗಳ ಕಾಲಾವಕಾಶವನ್ನು ನೀಡಬೇಕು’ ಎಂದು ಕೋರಿದರು. ಆದರೆ, ಮತ್ತೆ ಅವಧಿ ವಿಸ್ತರಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. 

ರಾಜ್ಯ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್‌.ಫಣೀಂದ್ರ, ‘ಐದು ಪಾಲಿಕೆಗಳ ಅಂತಿಮ ಮತದಾರರ ಪಟ್ಟಿ ಮಾರ್ಚ್‌ 16ರಂದು ಪ್ರಕಟವಾಗಲಿದೆ. ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರ ಅಗತ್ಯ ಇರುವುದರಿಂದ ಮೇ ಅಂತ್ಯದ ವೇಳೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸಬಹುದು’ ಎಂದು ವಾದ ಮಂಡಿಸಿದರು. 

‘ಪರೀಕ್ಷೆ ಮುಗಿದ ಬೆನ್ನಲ್ಲೇ ಮಾ‌ರ್ಚ್‌ನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು. ಆಗ ಕೆ.ಎನ್‌.ಫಣೀಂದ್ರ, ‘ಚುನಾವಣಾ ಕೆಲಸಕ್ಕೆ ಶಿಕ್ಷಕರು ಲಭ್ಯವಾಗುವುದು ಮೇ ಅಂತ್ಯಕ್ಕೆ. ಚುನಾವಣಾ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮುಗಿಸಲಿದ್ದೇವೆ’ ಎಂದು ಬಿನ್ನವಿಸಿದರು. ಆಗ ಪೀಠವು, ‘ಚುನಾವಣಾ ಪ್ರಕ್ರಿಯೆಯು ಜೂನ್‌ 30ರೊಳಗೆ ಪೂರ್ಣಗೊಳ್ಳಬೇಕು’ ಎಂದು ಆಯೋಗಕ್ಕೆ ನಿರ್ದೇಶನ ನೀಡಿತು. 

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿಯು 2020ರ ಸೆಪ್ಟೆಂಬರ್ 10ರಂದು ಮುಗಿದಿತ್ತು. ಆರು ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಅಮಾನತಿನಲ್ಲಿ ಇರಿಸಿತ್ತು. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ– 2020ರ ಅನ್ವಯ ರಚಿಸಲಾಗುವ 243 ವಾರ್ಡ್‌ಗಳ ಬದಲಿಗೆ, ಮೊದಲಿದ್ದ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.