ADVERTISEMENT

ನೀರಿನ ದರ ಗೊತ್ತು, ಹನಿಯ ಮೌಲ್ಯ ತಿಳಿದಿಲ್ಲ: ಸುರೇಶ್ ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 22:00 IST
Last Updated 9 ಜೂನ್ 2020, 22:00 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಬೆಂಗಳೂರು: ‘ಬೆಂಗಳೂರಿಗೆ ಪೂರೈಕೆಯಾಗುವ ಕುಡಿಯುವ ನೀರನ್ನು ಕಾರು, ಮನೆ ತೊಳೆಯಲು ಬಳಸುತ್ತಾರೆ. ಜನರಿಗೆ ತಾವು ಬಳಸುವ ನೀರಿನ ಬಿಲ್ ಮೊತ್ತ ಗೊತ್ತು. ಆದರೆ, ನೀರಿನ ಹನಿಯ ಮೌಲ್ಯ ತಿಳಿದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಸಮರ್ಥ ಭಾರತ ಸಂಸ್ಥೆಯು ಫೇಸ್‍ಬುಕ್ ಲೈವ್‍ ಮೂಲಕ ನಡೆಸಿದ‘ಪರಿಸರ ಸಪ್ತಾಹ’ದ ಸಮಾರೋಪದಲ್ಲಿ ಸೋಮವಾರ ಅವರು ಮಾತನಾಡಿದರು.

‘ಬೆಂಗಳೂರಿಗೆ ಕುಡಿಯುವ ನೀರು ನೂರಾರು ಕಿ.ಮೀ ದೂರದಿಂದ ಹೇಗೆ ಪೂರೈಕೆಯಾಗುತ್ತದೆ ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ. ಜೀವನದ ಭಾಗವಾಗಬೇಕಿದ್ದ ಪರಿಸರ, ಇಂದು ಉಪನ್ಯಾಸದ ವಿಷಯವಾಗಿದೆ. ಪರಿಸರ ಸಂರಕ್ಷಣೆಯ ಚರ್ಚೆಗಳು ಹೆಚ್ಚಾಗುತ್ತಿವೆ. ಆದರೆ, ಜವಾಬ್ದಾರಿ ಕುಸಿದಿದೆ’ ಎಂದರು.

ADVERTISEMENT

‘ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ವೃಷಭಾವತಿ ನದಿ ನೀರಿನಿಂದ ದೇವರಿಗೆ ಅಭಿಷೇಕ ನಡೆಯುತ್ತಿತ್ತು. ಈಗ ಆ ಜಾಗದಲ್ಲಿ ಐದು ನಿಮಿಷ ನಿಲ್ಲುವುದಕ್ಕೂ ಆಗದು’ ಎಂದರು.

ಖಾಲಿಯಾದ ಕೊಳವೆಬಾವಿಗಳು: ‘ಇಂದು ಕೊಳವೆ ಬಾವಿಗಳು ಖಾಲಿ ಎಟಿಎಂಗಳಂತಾಗಿವೆ. ನೀರನ್ನು ಸಂರಕ್ಷಿಸದೆ ಕೊಳವೆ ಬಾವಿ ಕೊರೆಸುವುದು ಅರ್ಥಹೀನ. ಭೋಗ ಲಾಲಸೆ ಹೆಚ್ಚಿದಾಗ ಪ್ರವಾಹ, ಭೂಕುಸಿತಗಳಂತಹ ಅನಾಹುತಗಳು ಕಟ್ಟಿಟ್ಟಬುತ್ತಿ’ ಎಂದು ಎಚ್ಚರಿಸಿದರು.

ಲಾಕ್‍ಡೌನ್‌ ಪರಿಹಾರವಾಯಿತೇ?
‘ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಹೇರಿದ ಬಳಿಕ ದೂರದ ಪ್ರದೇಶಗಳಿಗೂ ಹಿಮಾಲಯ, ಮೌಂಟ್ ಎವರೆಸ್ಟ್, ಗೌರಿಶಂಕರ ಸ್ಪಷ್ಟವಾಗಿ ಕಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಇದೇ ವೇಳೆ ಬೆಂಗಳೂರಿನಲ್ಲಿ ಹರಿಯುವ ವೃಷಭಾವತಿ ನದಿಯೂ ಶುದ್ಧವಾಗಿತ್ತು ಎಂದು ಹಲವರು ತಿಳಿಸಿದರು. ಇದನ್ನು ಗಮನಿಸಿದರೆ ಪರಿಸರ ಸಂರಕ್ಷಣೆಗಾಗಿ ಕೊರೊನಾ ಪ್ರಕೃತಿಯೇ ಹುಡುಕಿಕೊಂಡ ಪರಿಹಾರದ ಮಾರ್ಗ ಇರಬಹುದಾ? ಎಂಬ ಪ್ರಶ್ನೆ ಮೂಡಿದೆ’ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.