ADVERTISEMENT

ಆಮೆ ಚಿಪ್ಪು ಸರಿಪಡಿಸಲು ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 13:45 IST
Last Updated 21 ಜುಲೈ 2019, 13:45 IST
ಆಮೆಯ ಚಿಪ್ಪಿಗೆ ಟೈಟಾನಿಯಂ ಪ್ಲೇಟ್‌ಗಳನ್ನು ಜೋಡಿಸಿರುವುದು
ಆಮೆಯ ಚಿಪ್ಪಿಗೆ ಟೈಟಾನಿಯಂ ಪ್ಲೇಟ್‌ಗಳನ್ನು ಜೋಡಿಸಿರುವುದು   

ಬೆಂಗಳೂರು: ಮನುಷ್ಯನ ಮಂಡಿ ಚಿಪ್ಪು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ಕೇಳಿರುತ್ತೀರಿ. ಆದರೆ, ಆಮೆಯ ಚಿಪ್ಪು ಮರು ಜೋಡಣೆಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಎಲ್ಲಾದರೂ ಕೇಳಿದ್ದೀರಾ?

ಗಾಯಗೊಂಡು ದಾರಿ ಬದಿಯಲ್ಲಿ ಬಿದ್ದಿದ್ದ ಆಮೆಗೆ ನಗರದ ಪೀಪಲ್ಸ್‌ ಫಾರ್‌ ಅನಿಮಲ್ಸ್‌ ಸಂಘಟನೆಯ ವನ್ಯಜೀವಿ ಆಸ್ಪತ್ರೆಯ ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಿ, ಕಿತ್ತುಹೋದ ಚಿಪ್ಪನ್ನು ಮತ್ತೆ ಜೋಡಿಸಿದ್ದಾರೆ.

ಮೈಸೂರು ಬೆಂಗಳೂರು ರಾಷ್ಟರೀಯ ಹೆದ್ದಾರಿ ಪಕ್ಕದಲ್ಲಿ ಗಾಯಗೊಂಡು ಬಿದ್ದಿದ್ದ ಆಮೆಯನ್ನು ರಕ್ಷಿಸಿದ್ದ ಹೇಮಾ ಎಂಬುವರು ಪಿಎಫ್‌ಎ ವನ್ಯಜೀವಿ ಆಸ್ಪತ್ರೆಗೆ ಅದನ್ನು ಒಪ್ಪಿಸಿದ್ದರು. ದೇಹದ ಒಳ ಅಂಗಗಳೂ ಗಾಯಗೊಂಡಿದ್ದರಿಂದ ಆಮೆ ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿತ್ತು.

ADVERTISEMENT

ಆಸ್ಪತ್ರೆಯ ಪಶುವೈದ್ಯರು ತಕ್ಷಣವೇ ಅದಕ್ಕೆ ಜೀವರಕ್ಷಕ, ನೋವು ನಿವಾರಕ ಔಷಧಿಗಳನ್ನು ನೀಡಿದ್ದಲ್ಲದೇ, ರಕ್ತಸೋರಿಕೆ ತಡೆಯುವ ಚಿಕಿತ್ಸೆಯನ್ನು ನೀಡಿದರು. ಕೃತಕ ಉಸಿರಾಟಕ್ಕೂ ವ್ಯವಸ್ಥೆ ಮಾಡಿದರು. ಚಿಪ್ಪು ಹರಿದಿದ್ದರಿಂದ ಉಂಟಾದ ಬೇಗ ಗಾಯ ವಾಸಿಯಾಗಬೇಕೆಂಬ ಉದ್ದೇಶದಿಂದ ಆಮೆ ನೀರಿನಿಂದ ಹೊರಗೆ ಇರುವಂತೆ ನೋಡಿಕೊಳ್ಳಲಾಯಿತು. ಗಾಯ ವಾಸಿಯಾದ 10 ದಿನಗಳ ಬಳಿಕ ಅದನ್ನು ಮತ್ತೆ ನೀರಿಗೆ ಬಿಡಲಾಯಿತು. ಆ ಬಳಿಕವೂ ಚಿಪ್ಪು ಸರಿಯಾಗಿ ಜೋಡಣೆ ಆಗದ ಕಾರಣ ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದರು.

ಡಾ. ಕಾರ್ತಿಕ್‌, ಡಾ.ಪಿ.ಮೇಘನಾ ಹಾಗೂ ಡಾ.ಆರ್‌.ಸಿಲಂಬರಸನ್‌ ಅವರನ್ನು ಒಳಗೊಂಡ ತಜ್ಞ ವೈದ್ಯರ ತಂಡವು ಜು.12ರಂದು ಆಮೆಗೆ ಶಸ್ತ್ರಚಿಕಿತ್ಸೆ ನಡೆಸಿ ಟೈಟಾನಿಯಂ ಪ್ಲೇಟ್‌ಗಳನ್ನು ಜೋಡಿಸುವ ಮೂಲಕ ಚಿಪ್ಪನ್ನು ಬಲಪಡಿಸಿತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

‘ಚಿಪ್ಪಿನ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲು ಟೈಟಾನಿಯಂ ಪ್ಲೇಟ್‌ಗಳು ನೆರವಾಗುತ್ತವೆ’ ಎಂದು ಡಾ. ಕಾರ್ತಿಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.