ADVERTISEMENT

‘ಅಲ್‌ಕೈದಾ’ ನಂಟು: ಬೆಂಗಳೂರಿನ ತಿಲಕ್‌ ನಗರದಲ್ಲಿ ಶಂಕಿತ ಉಗ್ರ‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 19:39 IST
Last Updated 25 ಜುಲೈ 2022, 19:39 IST
ಅಖ್ತರ್ ಹುಸೇನ್ ಲಷ್ಕರ್‌
ಅಖ್ತರ್ ಹುಸೇನ್ ಲಷ್ಕರ್‌   

ಬೆಂಗಳೂರು: ‘ಅಲ್‌ಕೈದಾ’ ಉಗ್ರ ಸಂಘಟನೆಗೆ ನೇಮಕವಾಗಿ ಅಫ್ಗಾನಿಸ್ತಾನಕ್ಕೆ ಹೋಗಲು ತಯಾರಾಗಿದ್ದ ಅಖ್ತರ್ ಹುಸೇನ್ ಲಷ್ಕರ್‌ನನ್ನು(24) ನಗರದ ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದಅಸ್ಸಾಂನ ಅಖ್ತರ್ ಹುಸೇನ್, ತಿಲಕ್‌ನಗರದ ಬಿಟಿಪಿ ಪ್ರದೇಶದಲ್ಲಿ ಸ್ನೇಹಿತರ ಜೊತೆ ವಾಸವಿದ್ದ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕೇಂದ್ರ ಗುಪ್ತದಳ ಅಧಿಕಾರಿಗಳ ಸಮೇತ ಜಂಟಿ ಕಾರ್ಯಾಚರಣೆ ನಡೆಸಿ ಅಖ್ತರ್‌ನನ್ನು ಬಂಧಿಸಲಾಗಿದೆ. ಈತನ ಜೊತೆ ಮೂವರು ಸ್ನೇಹಿತರನ್ನೂ ವಶಕ್ಕೆ ಪಡೆಯಲಾಗಿತ್ತು. ಕೃತ್ಯದಲ್ಲಿ ಅವರ ಪಾತ್ರ ಇಲ್ಲದಿರುವುದರಿಂದ ಬಿಟ್ಟು ಕಳುಹಿಸಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

10ನೇ ತರಗತಿಗೆ ಶಾಲೆ ಬಿಟ್ಟಿದ್ದ: ‘ಬಡ ಕುಟುಂಬದಲ್ಲಿ ಬೆಳೆದಿದ್ದ ಅಖ್ತರ್, 10ನೇ ತರಗತಿಗೆ ಶಾಲೆ ಬಿಟ್ಟಿದ್ದ. ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ. ಅಲ್‌ಕೈದಾ ಉಗ್ರರನ್ನು ಸಂಪರ್ಕಿಸಿ, ಸಂಘಟನೆ ಸೇರಲು ಮುಂದಾಗಿದ್ದ. ಈತನ ಬಗ್ಗೆಸ್ಥಳೀಯ ಪೊಲೀಸರಿಗೆ ಅನುಮಾನ ಬಂದಿತ್ತು. ಆಗಲೇ ಅಖ್ತರ್, ಊರು ಬಿಟ್ಟು 2020ರಲ್ಲಿ ಬೆಂಗಳೂರಿಗೆ ಬಂದಿದ್ದ’ ಎಂದಿವೆ.

ಮಾತುಕತೆಗೆ ಫೇಸ್‌ಬುಕ್‌, ಟೆಲಿಗ್ರಾಂ: ‘ಅಲ್‌ಕೈದಾ ಸಂಘಟನೆಗೆ ಸೇರಲು ಕೆಲ ಯುವಕರು, ಫೇಸ್‌ಬುಕ್ ಹಾಗೂ ಟೆಲಿಗ್ರಾಮ್ ಆ್ಯಪ್‌ಗಳಲ್ಲಿ ಗ್ರೂಪ್ ರಚಿಸಿಕೊಂಡಿದ್ದಾರೆ. ಹೈಡರ್ ಈಗಲ್, ಬಾಂಗ್ಲಾ ಹೈಡರ್, ಅಫ್ಗಾನ್ ಈಗಲ್ ಸೇರಿದಂತೆ ಹಲವು ಹೆಸರಿನ ಗ್ರೂಪ್‌ಗಳಿವೆ. ಇವುಗಳಲ್ಲಿ ಅಖ್ತರ್ ಹೆಚ್ಚು ಸಕ್ರಿಯನಾಗಿದ್ದ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.