ADVERTISEMENT

ಅಧಿಕಾರಿಗಳ ಕೈಕಟ್ಟಿತೇ ಕಸದ ಮಾಫಿಯಾ?

ಅ.1ರಿಂದಲೂ ಹೊಸ ಟೆಂಡರ್‌ ಜಾರಿ ಅನುಮಾನ: ಕಸ ವಿಂಗಡಣೆ– ವಾರದಲ್ಲಿ ಮುಗಿಯಲಿದೆ ಎನ್‌ಜಿಟಿ ಗಡುವು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 3:33 IST
Last Updated 25 ಸೆಪ್ಟೆಂಬರ್ 2019, 3:33 IST
ಕುಮಾರಸ್ವಾಮಿ ಲೇಔಟ್‌ನ ಹೊರವರ್ತುಲ ರಸ್ತೆಯ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯ ಬಳಿ ರಸ್ತೆಯುದ್ದಕ್ಕೂ ಸಂಗ್ರಹವಾಗಿದ್ದ ಕಸದ ರಾಶಿ  –ಪ್ರಜಾವಾಣಿ ಸಂಗ್ರಹ ಚಿತ್ರ
ಕುಮಾರಸ್ವಾಮಿ ಲೇಔಟ್‌ನ ಹೊರವರ್ತುಲ ರಸ್ತೆಯ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯ ಬಳಿ ರಸ್ತೆಯುದ್ದಕ್ಕೂ ಸಂಗ್ರಹವಾಗಿದ್ದ ಕಸದ ರಾಶಿ  –ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ಮನೆ ಮನೆಯಿಂದ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವಾರ್ಡ್‌ವಾರು ಗುತ್ತಿಗೆಯನ್ನು ಸೆ.1ರಿಂದ ಜಾರಿಗೊಳಿಸುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ನಂತರ ಆ ಗಡುವನ್ನು ಅ.1ಕ್ಕೆ ವಿಸ್ತರಿಸಿತ್ತು. ಆದರೆ, ಆ ಗಡುವಿನೊಳಗೂ ಹೊಸ ಟೆಂಡರ್‌ ಜಾರಿಯಾಗುವ ಲಕ್ಷಣಗಳು ಸದ್ಯ ಕಾಣುತ್ತಿಲ್ಲ.

‘ಕೆಲವು ವಾರ್ಡ್‌ಗಳ ಟೆಂಡರ್‌ಗೆ ಮತ್ತೆ ಪಾಲಿಕೆ ಕೌನ್ಸಿಲ್‌ ಸಭೆಯ ಅನುಮೋದನೆ ಪಡೆಯಬೇಕಾಗುತ್ತದೆ. ಹೊಸ ಟೆಂಡರ್ ಜಾರಿ ಏನಿದ್ದರೂ ಹೊಸ ಮೇಯರ್‌ ಆಯ್ಕೆ ಹಾಗೂ ಹೊಸ ಸ್ಥಾಯಿಸಮಿತಿ ರಚನೆಯ ನಂತರವೇ ನಡೆಯಲಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ಬಹುತೇಕ ವಾರ್ಡ್‌ಗಳ ವಾರ್ಷಿಕ ಟೆಂಡರ್‌ ಮೊತ್ತ ₹1 ಕೋಟಿಯಿಂದ ₹2 ಕೋಟಿ ನಡುವೆ ಇದೆ. ₹1 ಕೋಟಿಗಿಂತ ಕಡಿಮೆ ಮೊತ್ತದ ಟೆಂಡರ್‌ಗೆ ಆಯುಕ್ತರೇ ಮಂಜೂರಾತಿ ನೀಡಬಹುದು. ಅದಕ್ಕಿಂತ ಹೆಚ್ಚು ಇದ್ದರೆ ಕೌನ್ಸಿಲ್‌ ಸಭೆಯ ಅನುಮೋದನೆ ಅಗತ್ಯ’ ಎಂದು ಹೆಚ್ಚುವರಿ ಆಯುಕ್ತ ಡಿ.ರಂದೀಪ್‌ ತಿಳಿಸಿದರು.

ADVERTISEMENT

ಕಸದ ಮಾಫಿಯಾ ಹಾಗೂ ಗುತ್ತಿಗೆದಾರರ ಅಸಹಕಾರದಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮ ವಿಳಂಬವಾಗುತ್ತಲೇ ಇದೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಗುತ್ತಿಗೆದಾರರಿಗೆ ಪಾಲಿಕೆ ಒಪ್ಪಿಗೆ ಪತ್ರ ನೀಡಿದೆ. ಆದರೂ ಅವರು ಕಸ ಸಂಗ್ರಕ್ಕೆ ಬಳಸುವ ವಾಹನಗಳು, ಅವುಗಳ ಚಾಲಕರ ವಿವರಗಳನ್ನು ಒದಗಿಸದೆ ಸತಾಯಿಸುತ್ತಿದ್ದಾರೆ.

‘ನಾವು ಈಗಾಗಲೇ 35 ಗುತ್ತಿಗೆದಾರರಿಗೆ ಒಪ್ಪಿಗೆ ಪತ್ರ ನೀಡಿದ್ದೇವೆ. ಅವರು ಸಹಕರಿಸದ ಕಾರಣ ಹೊಸ ಟೆಂಡರ್‌ ಜಾರಿ ವಿಳಂಬವಾಗುತ್ತಿದೆ. ಮೇಯರ್ ಚುನಾವಣೆ ಮುಗಿಯುತ್ತಿದ್ದಂತೆಯೇ ಗುತ್ತಿಗೆ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ರಂದೀಪ್‌ ಸ್ಪಷ್ಟಪಡಿಸಿದರು.

ಒಂದಷ್ಟು ವಾರ್ಡ್‌ಗಳಲ್ಲಿ ಕಾರ್ಯಾದೇಶಗಳನ್ನು ನೀಡಿ ಹೊಸ ವ್ಯವಸ್ಥೆ ಜಾರಿಗೊಳಿಸಿ ಮೇಲ್ಪಂಕ್ತಿ ಹಾಕಿಕೊಡಬೇಕಿದೆ. ಇದರಿಂದ ಪ್ರೇರಣೆ ಪಡೆದು ಇತರ ಕಡೆಯೂ ಹೊಸ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ ಎಂದರು.

‘ಆಟೊಟಿಪ್ಪರ್‌ ಪತ್ತೆಗೆ ಆರ್‌ಎಫ್‌ಐಡಿ’
‘ಕೆಲವು ವಾರ್ಡ್‌ಗಳ ಮನೆಗಳಲ್ಲಿ ಆರ್‌ಎಫ್ಐಡಿ ಸ್ಟಿಕ್ಕರ್‌ ಅಂಟಿಸಿದ್ದೇವೆ. ಆಟೊಟಿಪ್ಪರ್‌ ಚಾಲಕ ಅದನ್ನು ಸ್ಕ್ಯಾನ್‌ ಮಾಡಬೇಕು. ವಿಶಾಖಪಟ್ಟಣದಲ್ಲಿ ಯಶಸ್ಸಿಯಾಗಿರುವ ಈ ವ್ಯವಸ್ಥೆಯನ್ನು ನಗರದಲ್ಲೂ ಅಳವಡಿಸಲಿದ್ದೇವೆ’ ಎಂದು ರಂದೀಪ್‌ ತಿಳಿಸಿದರು.

‘ಆಟೋಟಿಪ್ಪರ್‌ಗಳಿಗೆ ಜಿಪಿಎಸ್‌ ಟ್ಯಾಗ್‌ಗಳನ್ನು ನೀಡಿದ್ದೇವೆ. ಮೊಬೈಲ್‌ ಆ್ಯಪ್‌ ಮೂಲಕ ಯಾವ ವಾಹನ ಮನೆ ಬಾಗಿಲಿದೆ ಬರುತ್ತಿದೆ ಎಂಬುದನ್ನು ತಿಳಿಯಬಹುದು. ಜಿಪಿಎಸ್‌ ಟ್ಯಾಗಿಂಗ್‌ಗೆ ನವ ಬೆಂಗಳೂರು ಯೋಜನೆಯಡಿ ಅನುದಾನ ಕೇಳಿದ್ದೇವೆ’ ಎಂದರು.

ಶೇ 35ರಷ್ಟು ಕಸ ಮಾತ್ರ ವಿಂಗಡಣೆ
‘ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ ಶೇ 35ರಷ್ಟು ಕಸವನ್ನು ಮಾತ್ರ ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಲಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ವಿಂಗಡಣೆ ಪ್ರಮಾಣ ಶೇ 85ರಷ್ಟು ಇದೆ. ವಾಣಿಜ್ಯ ಪ್ರದೇಶಗಳಿರುವ ವಾರ್ಡ್‌ಗಳಲ್ಲಿ ಶೇ 10ರಷ್ಟೂ ವಿಂಗಡಣೆ ಆಗುತ್ತಿಲ್ಲ’ ಎಂದು ರಂದೀಪ್‌ ಮಾಹಿತಿ ನೀಡಿದರು.

‘ಮನೆಯವರು ಕಸ ವಿಂಗಡಿಸಿದರೂ ಕೆಲವೆಡೆ ಆಟೊಟಿಪ್ಪರ್‌ನಲ್ಲಿರುವ ಸಿಬ್ಬಂದಿಯೇ ಅದನ್ನು ಮಿಶ್ರ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಅಂತಹವರಿಗೆ ದಂಡ ವಿಧಿಸಲಿದ್ದೇವೆ’ ಎಂದರು. ‘ಕಸ ವಿಲೇವಾರಿಯ ಹೊಸ ಬೈಲಾದ ಕುರಿತು ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದ್ದೇವೆ. ದಂಡದ ಪ್ರಮಾಣ ಅನೇಕ ಪಟ್ಟು ಹೆಚ್ಚಾಗಲಿದೆ’ ಎಂದರು.

‘ಉದ್ಯಾನದಲ್ಲಿ ಕಾಂಪೋಸ್ಟ್‌’
‘ಆಯಾ ವಾರ್ಡ್‌ಗಳಲ್ಲೇ ಕಸ ವಿಲೇವಾರಿ ಮಾಡಿದರೆ ಭೂಭರ್ತಿ ಕೇಂದ್ರಗಳಿಗೆ ಮಿಶ್ರ ಕಸ ತಲುಪುವುದು ತನ್ನಿಂದ ತಾನೆ ನಿಲ್ಲಲಿದೆ. ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವ ಕಲಿಕಾ ಕೇಂದ್ರವಿದೆ. ಇದೇ ಮಾದರಿಯನ್ನು ಪ್ರತಿ ವಾರ್ಡ್‌ನಲ್ಲೂ ಅನುಸರಿಸುತ್ತೇವೆ’ ಎಂದು ಅನಿಲ್‌ ಕುಮಾರ್‌ ತಿಳಿಸಿದರು.

ಮಿಟಗಾನಹಳ್ಳಿ ಕಲ್ಲುಗುಂಡಿ ಸಜ್ಜು
‘ಮಿಟಗಾನಹಳ್ಳಿಯ ಕಲ್ಲು ಗುಂಡಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ₹ 15 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕ್ವಾರಿಯನ್ನು ನಾಲ್ಕು ತಿಂಗಳ ಕಾಲ ಬಳಸಬಹುದು’ ಎಂದು ಹೆಚ್ಚುವರಿ ಆಯುಕ್ತರು ತಿಳಿಸಿದರು.

‘ಇಲ್ಲಿ ಈ ಹಿಂದೆ 1 ಲಕ್ಷ ಲೀಟರ್‌ ಲೀಚೆಟ್‌ (ಕೊಳಚೆನೀರು) ಸಂಸ್ಕರಿಸಲು ಅವಕಾಶವಿತ್ತು. ಇದರ ಸಾಮರ್ಥ್ಯವನ್ನು 3 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಎಚ್‌ಡಿಪಿಇ ಲೈನರ್‌ಗಳನ್ನು ಜೋಡಿಸುತ್ತಿದ್ದೇವೆ. ಇಲ್ಲಿಗೆ ಸಮೀಪದ ಬೆಳ್ಳಹಳ್ಳಿಯಲ್ಲಿ ಸಂಸ್ಕರಣಾಪೂರ್ವ ಪ್ರಕ್ರಿಯೆಗಳನ್ನು ನಡೆಸಿ ಮರುಬಳಕೆಯ ವಸ್ತುಗಳನ್ನು ಹಾಗೂ ಆರ್‌ಡಿಎಫ್‌ ಪ್ರತ್ಯೇಕಿಸುತ್ತೇವೆ. ನಿರುಪಯುಕ್ತ ಕಸವನ್ನು ಮಾತ್ರ ಇಲ್ಲಿ ವಿಲೇವಾರಿ ಮಾಡುತ್ತೇವೆ’ ಎಂದರು.

**
ನ.1ರಿಂದ ಭೂಭರ್ತಿ ಕೇಂದ್ರಗಳಿಗೆ ಯಾವುದೇ ಕಾರಣಕ್ಕೂ ಮಿಶ್ರ ಕಸ ಹೋಗಬಾರದು ಎಂದು ಬಿಬಿಎಂಪಿಗೆ ಸೂಚಿಸಿದ್ದೇನೆ. ಅವರು ಕೇಳಿದಷ್ಟು ಕಾಲಾವಕಾಶ ನೀಡಿ ಆಗಿದೆ.
-ಸುಭಾಷ್‌ ಬಿ ಅಡಿ,ಕಸ ವಿಲೇವಾರಿ ರಾಜ್ಯಮಟ್ಟದ ಉಸ್ತುವಾರಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.